ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

ಶಿವಮೊಗ್ಗ: ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಲಾಗಿದೆ. ಹಾಗೂ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಆರ್ ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಇಂದು ಶಿವಮೊಗ್ಗದಲ್ಲಿ ನಡೆದ ರಾಜ್ಯ ರೈತ ಸಂಘದ ಸಭೆಯಲ್ಲಿ 18 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು, ರಾಜ್ಯ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಸಮಾಲೋಚನೆ ನಡೆಸಿದ್ದಾರೆ. ಹಾಗೂ ಕೋಡಹಳ್ಳ ಚಂದ್ರಶೇಖರ್ ಅವರನ್ನು ವಜಾಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, ಇನ್ನುಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಎಲ್ಲಾ ರೈತ ಸಂಘಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ. ಇದೊಂದು ವಿಶೇಷ ಸಂದರ್ಭ. 1980 ರಲ್ಲಿ ರೈತ ಚಳವಳಿ ಆರಂಭವಾಯ್ತು. 1972 ರಲ್ಲೇ ಶಿವಮೊಗ್ಗದಲ್ಲಿ ರೈತ ಸಂಘ, ಮೂಡಿಗೆರೆಯಲ್ಲಿ ಕಬ್ಬು ಬೆಳೆಗಾರರ ಸಮಾವೇಶವನ್ನು ಪ್ರೊ. ನಂಜುಡಸ್ವಾಮಿ ಮಾಡಿದ್ದರು. ಶಿವಮೊಗ್ಗ ಜಿಲ್ಲೆಗೆ ರೈತ ಸಂಘದ 50 ವರ್ಷ ಚಳವಳಿ ಹಿನ್ನಲೆ ಇದೆ ಎಂದರು.