ವಾಹನ ಸವಾರರೇ ಎಚ್ಚರಿಕೆ! ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಶುರು

ವಾಹನ ಸವಾರರೇ ಎಚ್ಚರಿಕೆ! ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಶುರು

ಬೆಂಗಳೂರು : ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಟೋಯಿಂಗ್ ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ. 

ರಸ್ತೆಗಳ ಮೇಲೆ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಮಾಡುತ್ತೇವೆ. 21 ದಿನಗಳಲ್ಲಿ ಆ ವಾಹನಗಳನ್ನು ಹರಾಜು ಹಾಕುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 

ವಾಹನ ಟೋಯಿಂಗ್ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 2022ರ ಫೆಬ್ರವರಿಯಲ್ಲಿ ಟೋಯಿಂಗ್ ಬಂದ್ ಆಗಿತ್ತು. ಕೆಲವು ಹೊಸ ನಿಯಮ, ಗೈಡ್ ಲೈನ್ಸ್ನೊಂದಿಗೆ ಟೋಯಿಂಗ್ ಪ್ರಾರಂಭಿಸಲಾಗುವುದು ಎಂದು ಈ ಹಿಂದಿನ ಸರ್ಕಾರ ಹೇಳಿತ್ತು. ಆದರೆ, ಮತ್ತೆ ಟೋಯಿಂಗ್ ಪ್ರಾರಂಭವಾಗಿರಲಿಲ್ಲ. ಇದೀಗ ಮತ್ತೆ ಟೋಯಿಂಗ್ ಆರಂಭಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಟ್ರಾಫಿಕ್ ಸಮಸ್ಯೆಗೆ ಕಡಿವಾಣ 

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಮೆಟ್ರೋ ಕಾಮಗಾರಿಗಳ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತೇವೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಟನಲ್‌ ರೋಡ್ ನಿರ್ಮಾಣಕ್ಕೆ ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ಶಾಸಕರ ಬೆಂಬಲ ಇದೆ ಎಂದು ಡಿಸಿಎಂ ತಿಳಿಸಿದ್ದಾರೆ.