ನಾಳೆ ಬೆಂಗಳೂರಿಗೆ ಅಮಿತ್ ಶಾ ಆಗಮನ - ಹೆಚ್‌ಡಿಕೆ ಜೊತೆ ಉಪಹಾರ!

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಲು ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾದ ಕೇಂದ್ರ ಸಚಿವ ಅಮಿತ್ ಶಾ ಅವರು ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಸಹಕಾರ ಸಚಿವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಸೇರಿದಂತೆ ಮತ್ತಿತರರು ಸ್ವಾಗತಿಸಲಿದ್ದಾರೆ. ನಾಳೆ ಬೆಳಗ್ಗೆ ಬಿಜೆಪಿ ಸಂಸದರು ಮತ್ತು ಲೋಕಸಭಾ ಅಭ್ಯರ್ಥಿಗಳೊಂದಿಗೆ ಚುನಾವಣಾ ಪ್ರಚಾರದ ಕುರಿತು ಶಾ ಚರ್ಚೆ ನಡೆಸಲಿದ್ದು, ಬಳಿಕ ಸಾಯಂಕಾಲ ರಾಮನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ನಾಳೆ ಬೆಂಗಳೂರಿಗೆ ಆಗಮಿಸಿಲಿರೋ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಉಪಹಾರವನ್ನು ಸವಿಯಲಿದ್ದು, ಇದೇ ವೇಳೆ ಮಂಡ್ಯ ಚುನಾವಣೆ ಗೆಲ್ಲಲು ರಣತಂತ್ರವನ್ನೂ ಹೆಣೆಯಲಿದ್ದಾರೆಂದು ಹೇಳಲಾಗುತ್ತೆ.
ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಮುನ್ನಾ ದಿನವಾದ ಇಂದು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ರಾಮನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಮತಕ್ಷೇತ್ರದಲ್ಲಿ ಆಯೋಜಿಸಲಾದ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗುವ ಕೇಂದ್ರ ಸಚಿವ ಶಾ ಅವರು, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರ ಮತಯಾಚಿಸಲಿದ್ದಾರೆ. ಇನ್ನು, ರಾಜ್ಯಕ್ಕೆ ಕೇಂದ್ರ ಸಚಿವರ ನಾಳಿನ ಆಗಮನ ಹಿನ್ನೆಲೆ ಪೊಲೀಸರು ಬೆಂಗಳೂರು ಸೇರಿದಂತೆ ಮತ್ತಿತರೆಡೆಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.