ಇಂದಿನಿಂದ ಸಂಸತ ಬಜೆಟ್ ಅಧಿವೇಶನ ಶುರು

ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಶುರುವಾಗಿದೆ. ಮೊದಲ ದಿನವಾದ ಜ.31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಫೆ.1ರಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್ ಅಧಿವೇಶನ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಎರಡೂ ದಿನಗಳ ಕಾಲ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ಇರುವುದಿಲ್ಲ. ಬಜೆಟ್ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ, ಪೆಗಾಸಸ್ ಸ್ಪೈವೇರ್ ಅನ್ನು ಇಸ್ರೇಲ್ ನಿಂದ ಭಾರತದ ಖರೀದಿಸಿದೆ ಎಂಬ ವರದಿಯು ವಿಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ರೈತರ ಸಮಸ್ಯೆಗಳು, ಗಡಿಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಹಣದುಬ್ಬರ ವಿಚಾರಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳಿಗೆ ಪೆಗಾಸಸ್ ವಿಚಾರವು ಹೊಸ ಅಸ್ತ್ರವಾಗಿದೆ ಎನ್ನಲಾಗಿದೆ. ಬಜೆಟ್ ಅಧಿವೇಶನದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಸತ್ತಿನ ಉಭಯ ಕಲಾಪವನ್ನು 2 ಹಂತಗಳಲ್ಲಿ ವಿಭಜಿಸಲಾಗಿದೆ. ಈ ಪೈಕಿ ಜ.31ರಿಂದ ಪೆ.11ರವರೆಗೆ 10 ಕಲಾಪಗಳು ಮತ್ತು ಉಳಿದ 19 ಕಲಾಪಗಳು ಮಾ.14ರಿಂದ ಏ.8ರವರೆಗೆ ನಡೆಯಲಿದೆ. ಸಾಮಾಜಿಕ ಅಂತರ ಪಾಲನೆಗಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಪ್ರತ್ಯೇಕವಾಗಿ ನಡೆಯಲಿವೆ.