ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮೂಂದೂಡಿಕೆ - ಬೇಲ್‌ಗೆ ಅವಕಾಶ ಇದೆಯೇ ಎಂದು ಪ್ರಶ್ನಿಸಿದ ಕೋರ್ಟ್

ಬೆಂಗಳೂರು: ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಎಚ್.ಡಿ. ರೇವಣ್ಣ ಅವರು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಸಂತೋಷ್ ಗಜಾನಂದ್ ಭಟ್ ಅವರು ಪೊಲೀಸ್ ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿ ವಿಚಾರಣೆ ನಡೆಸಬುಹುದೇ ಎಂದು ಪ್ರಶ್ನಿಸಿ ಎಸ್‌ಐಟಿ ಹಾಗೂ ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಸುಖಾಸುಮ್ಮನೆ ತಮ್ಮ ಕಕ್ಷಿದಾರರನ್ನು ಸಿಲುಕಿಸಲಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು. ಇದಕ್ಕೆ ಮಧ್ಯಪ್ರವೇಶದ ಮಾಡಿದ ನ್ಯಾಯಾಧೀಶರು, ಆರೋಪಿ ಪೊಲೀಸ್ ವಶದಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ಮಾಡಲು ಹೇಗೆ ಸಾಧ್ಯ? ಎಂದು ನಾಗೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಒಂದು ವೇಳೆ ಬೇಲ್ ನೀಡಿದರೆ ಪೊಲೀಸ್ ಕಸ್ಟಡಿಯನ್ನು ಹೇಗೆ ಮುಂದುವರಿಸಲು ಸಾಧ್ಯ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು.
ಅದಕ್ಕೆ ವಾದ ಮಂಡಿಸಿದ ಸಿ.ವಿ. ನಾಗೇಶ್, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಾಮೀನು ನೀಡಬಹುದು. ಈ ಬಗ್ಗೆ ಇರುವ ಕಾನೂನಿನ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಗಮನಕ್ಕೆ ತಂದರು. ಈ ವೇಳೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಎಸ್‌ಐಟಿಯ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದು, ಪೊಲೀಸ್ ಕಸ್ಟಡಿಯಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ವಿಚಾರಣೆಯನ್ನು ನಾಳೆಗೆ (ಮೇ 8) ಮುಂದೂಡಿಕೆ ಮಾಡಲಾಗಿದೆ.