ಧಾರವಾಡ: ಮಾ.12 ರಂದು ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ

ಧಾರವಾಡ: ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಮಾ.12 ರಂದು "ಕಂದಾಯ ದಾಖಲೆ ಮನೆ ಬಾಗಿಲಿಗೆ " ಯೋಜನೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಎಲ್ಲಾ ಹಳ್ಳಿ, ಪಟ್ಟಣ, ಶಹರಗಳಲ್ಲಿನ ಸುಮಾರು 1,52,394 ಕುಟುಂಬಗಳ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಇಂದು ಸಂಜೆ ನಡೆಸಿದ ವೀಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಹುಬ್ಬಳ್ಳಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಿಂದಲೇ ಪ್ರೇರಣೆ ಪಡೆದು ಸರ್ಕಾರ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಾದ್ಯಂತ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು. ಮಾ. 12 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಯವರು ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಏಕ ಕಾಲಕ್ಕೆ ಈ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ರೈತರ ಮನೆಗೆ ಭೇಟಿ ನೀಡಿ ಕಂದಾಯ ದಾಖಲೆಗಳನ್ನು ಮುದ್ದಾಂ ವಿತರಿಸಲಾಗುವುದು. ಕಂದಾಯ ಸಿಬ್ಬಂದಿಯಾದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರರು, ಅಗತ್ಯವಿದ್ದಲ್ಲಿ ಇತರ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ರೈತ ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನು ತಲುಪಿಸಿ, ಸ್ವೀಕೃತಿ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಪಡೆಯಬೇಕು. ಕಾರ್ಯಕ್ರಮದ ನಂತರ ಸಾರ್ವಜನಿಕರಿಂದ ದೂರುಗಳು ಬಂದರೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಒಂದು ವೇಳೆ ದಾಖಲೆಗಳು ಮುದ್ರಣವಾಗದೇ ರೈತರಿಗೆ ದಾಖಲೆಗಳನ್ನು ಮುದ್ದಾಂ ತಲುಪಿಸಲು ಸಾಧ್ಯವಾಗದೇ ಇದ್ದರೆ ಅಂತಹ ರೈತರಿಗೆ ಮಾ. 21 ರಿಂದ 26 ರವರೆಗೆ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲು ಅವಕಾಶ ನೀಡಲಾಗಿದೆ. ಪೂರ್ವಸಿದ್ಧತೆ: "ಕಂದಾಯ ದಾಖಲೆ ಮನೆ ಬಾಗಿಲಿಗೆ" ಕಾರ್ಯಕ್ರಮಕ್ಕಾಗಿ ಆರ್.ಟಿ.ಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಮುದ್ರಣ ಮಾಡಿ ಕುಟುಂಬವಾರು ಮತ್ತು ಗ್ರಾಮವಾರು ವಿಂಗಡಿಸಿ ಪೂರ್ವ ಮುದ್ರಿತ ಫೋಲ್ಡರಿನಲ್ಲಿ ಹಾಕಿ ಇಂದು ರಾತ್ರಿಯೇ ಪರಿಶೀಲಿಸಿ, ಸಿದ್ಧಪಡಿಸಿಟ್ಟುಕೊಳ್ಳಬೇಕು. ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಸಿದ್ಧತೆಗಳಾಗಿರಬೇಕು. ಸ್ಥಳೀಯ ಶಾಸಕರು, ಚುನಾಯಿತ ಪ್ರತಿನಿಧಿಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಪ್ರತಿ ಎರಡು ಗಂಟೆಗಳಿಗೆ ಒಮ್ಮೆ ವಿತರಿಸಿದ ದಾಖಲೆಗಳ ಸಂಖ್ಯೆಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು. ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರರಾದ ಡಾ.ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಯಲ್ಲಪ್ಪ ಗೋಣೆನ್ನವರ, ಅಮರೇಶ ಪಮ್ಮಾರ, ನವೀನ ಹುಲ್ಲೂರ ಸೇರಿದಂತೆ ಜಿಲ್ಲೆಯ ಎಲ್ಲಾ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.