ಬಿಆರ್‌ಟಿಎಸ್ ಯೋಜನೆ: ಫುಟಪಾತ್ ಆಕ್ರಮಿಸಿಕೊಂಡವರಿಗೆ ನೋಟಿಸ್

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಅನುಷ್ಠಾನಗೊಂಡ ಬಿಆರ್‌ಟಿಎಸ್ ಯೋಜನೆಯಡಿ ಈಗಾಗಲೇ ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಧಾರವಾಡ ಜ್ಯುಬಿಲಿ ವೃತ್ತದವರೆಗೆ ರಸ್ತೆ ಅಗಲೀಕಣ ಮತ್ತು ಅಭಿವೃದ್ಧಿ (ನಗರ ವ್ಯಾಪ್ತಿಯಲ್ಲಿ 35 ಮೀಟರ್ ಅಗಲ, ಉಪನಗರ ವ್ಯಾಪ್ತಿಯಲ್ಲಿ 44 ಮೀಟರ್ ಅಗಲ ಕಾರ್ಯ ಅನುಷ್ಠಾನಗೊಳಿಸಲಾಗಿದೆ.
ಅದರನ್ವಯ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನಗೊಂಡ ಜಮೀನಿನ ವ್ಯಾಪ್ತಿಯಲ್ಲಿ ಬರುವ ಕಟ್ಟಡ ಹಾಗೂ ಇತರೇ ಭೌತಿಕ ವಸ್ತುಗಳನ್ನು ಈಗಾಗಲೇ ತೆರವುಗೊಳಿಸಿ ಯೋಜನೆಯ ವಿನ್ಯಾಸದಂತೆ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹುಬ್ಬಳ್ಳಿಯ ಹೊಸೂರು ವೃತ್ತದಿಂದ ನವೀನ್ ಹೊಟೇಲ್‍ವರೆಗೆ ಮತ್ತು ಧಾರವಾಡ ಗಾಂಧಿನಗರದಿಂದ ಜುಬಿಲಿ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಮಿಶ್ರಪಥಕ್ಕೆ ಹೊಂದಿಕೊಂಡು ಕ್ರಮವಾಗಿ 2.5 ಮೀಟರ್ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ ಹಾಗೂ ನಗರ ಪ್ರದೇಶವನ್ನು ಬಿಟ್ಟು ಹೊಟೇಲ್ ನವೀನ್ ಉಣಕಲ್‍ದಿಂದ ಧಾರವಾಡದ ಗಾಂಧಿನಗರದವರೆಗೆ 44 ಮೀಟರ್ ರಸ್ತೆಯಲ್ಲಿ ಮಿಶ್ರಪಥಕ್ಕೆ ಹೊಂದಿಕೊಂಡು 3.5 ಮೀಟರ್ ಪಾದಚಾರಿ ಮಾರ್ಗ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.
ಮುಂದುವರೆದು ಹುಬ್ಬಳ್ಳಿ ಮತ್ತು ಧಾರವಾಡದ ನಗರ ಪ್ರದೇಶಗಳಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗಗಳಲ್ಲಿ ನಿವೇಶನದ ಮಾಲೀಕರು ಕಾಪೌಂಡ್ ಗೋಡೆ, ಕಟ್ಟಡ, ಸಜ್ಜಾ, ಪಾವಟಿಗೆ, ತಂತಿಬೇಲಿ ಹಾಗೂ ಇತರೆ ಭೌತಿಕ ಅಂಶಗಳಿಂದ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಅಡೆತಡೆಯಾಗುತ್ತಿರುವುದು ಕಂಡು ಬಂದ ಪ್ರಯುಕ್ತ ಸದರಿ ಮಾಲೀಕರಿಗೆ ಪಾದಚಾರಿ ಮಾರ್ಗವನ್ನು ತೆರವುಗೊಳಿಸಿಕೊಳ್ಳಲು ನೊಟೀಸ್ ನೀಡಿ, ಹುಬ್ಬಳ್ಳಿ ಶಹರದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಆ ಪ್ರಕಾರ ಧಾರವಾಡದಲ್ಲಿಯೂ ಸಹ ನಗರ ವ್ಯಾಪ್ತಿಯಲ್ಲಿರುವ ಗಾಂಧಿನಗರದಿಂದ ಜುಬಿಲಿ ವೃತ್ತದವರೆಗೆ ಪಾದಚಾರಿ ಮಾರ್ಗದಲ್ಲಿ ಅತಿಕ್ರಮಿಸಿದ ಮಾಲೀಕರಿಗೆ ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಿಕೊಳ್ಳಲು 7 ದಿನಗಳ ಗಡವು ನೀಡಿ ಅಂತಿಮ ನೋಟಿಸ್ ನೀಡಲಾಗಿದೆ. ಅಷ್ಟರಲ್ಲಿ ಮಾಲೀಕರು ತಾವಾಗಿಯೇ ತೆರವುಗೊಳಿಸಿಕೊಳ್ಳದೆ ಇದ್ದಲ್ಲಿ ದಿನಾಂಕ 15.03.2022 ರಿಂದ ಬಿಆರ್‌ಟಿಎಸ್ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪಾದಚಾರಿ ಮಾರ್ಗ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ಆದುದರಿಂದ ಸಾರ್ವಜನಿಕರು ಸಹಕರಿಸಲು ಕೋರಿರುತ್ತಾರೆ.
ಪಾದಚಾರಿ ಮಾರ್ಗವೂ ಸಹ ಸರ್ಕಾರಿ, ಸಾರ್ವಜನಿಕ ಸ್ಥಳವಾಗಿರುವುದರಿಂದ, ಸರ್ಕಾರಿ, ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿರುವುದು ಮತ್ತು ಅಲ್ಲಿ ವೈಯಕ್ತಿಕ ಚಟುವಟಿಕೆಗಳನ್ನು ನಡೆಸುವುದು ಮಾನ್ಯ ಉಚ್ಚನ್ಯಾಯಾಲಯದ ತೀರ್ಪಿನ ಪ್ರಕಾರ ಕಾನೂನು ಬಾಹಿರವಾಗಿರುತ್ತದೆ ಆದುದರಿಂದ ಪಾದಚಾರಿ ಮಾರ್ಗದಲ್ಲಿ ಕಟ್ಟಿರುವ ಕಾಪೌಂಡ್ ಗೋಡೆ, ಕಟ್ಟಡ, ಸಜ್ಜಾ, ಪಾವಟಿಗೆ, ತಂತಿಬೇಲಿ ಹಾಗೂ ಇತರೆ ಭೌತಿಕ ಅಂಶಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಹೆಚ್‍ಡಿಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.