ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳನ್ನು ತೆಗೆದು ಹಾಕಲು ಡಿಸಿ ಸೂಚನೆ

ಧಾರವಾಡ : ವಾಹನ ಸವಾರರಿಗೆ ಸುರಕ್ಷಿತ ಸಂಚಾರದ ಭರವಸೆ ಮೂಡಿಸುವುದು ಸಂಬಂದಿಸಿದ ಇಲಾಖೆಗಳ ಕರ್ತವ್ಯ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ ಬರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳನ್ನು ತೆಗೆದು ಹಾಕಬೇಕು. ಈ ಕುರಿತು ಜಿಲ್ಲೆಯಲ್ಲಿ ರಸ್ತೆ ಸಮೀಕ್ಷೆ ಮಾಡುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ರಸ್ತೆ ಸಾರಿಗೆ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟವಾಗಿದೆ. ಅನುಮತಿ ಇಲ್ಲದೇ ಅನೇಕರು ರಸ್ತೆಗಳ ಮೇಲೆ ಹಂಪ್ಸ್ ಮಾಡುತ್ತಾರೆ. ಯಾವುದೇ ಮುನ್ಸೂಚನೆ ಇಲ್ಲದೇ ಹಂಪ್ಸ್ ಹಾಕುವುದರಿಂದ ಅಪಘಾತಗಳು ಹೆಚ್ಚಾಗಿ, ಸವಾರರ ಮರಣಗಳು ಹೆಚ್ಚುತ್ತವೆ. ಈ ಕುರಿತು ರಸ್ತೆ ಸಮೀಕ್ಷೆ ಮಾಡಿ, ಅನುಮತಿಯಿಲ್ಲದ ಹಂಪ್ಸ್‌ಗಳನ್ನು ತೆಗೆದು ಹಾಕಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಳೆದ ಸಭೆಯಲ್ಲಿ ಚರ್ಚಿಸಿದಂತೆ, ಹೆಚ್ಚು ಜನಸಂದಣಿ ಇರುವ ಮತ್ತು ಪ್ರಮುಖ ಸಂಚಾರ ನಿಲ್ದಾಣಗಳ ಸಮೀಪದಲ್ಲಿ ಮುಖ್ಯವಾಗಿ ಹುಬ್ಬಳ್ಳಿಯ ಐದು ಸ್ಥಳಗಳಲ್ಲಿ ಆಟೊ ನಿಲ್ದಾಣಗಳನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಕೆಲವು ಇನ್ನೂ ನಿರ್ಮಾಣ ಹಂತದಲ್ಲಿವೆ. ಅದಕ್ಕೆ ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅವಳಿನಗರದಲ್ಲಿ ಅನಧಿಕೃತ ಆಟೊಗಳ ಓಡಾಟ ಹೆಚ್ಚಾಗಿದೆ, ಸಾರ್ವಜನಿಕರಿಂದ ಅನಗತ್ಯವಾಗಿ ಹೆಚ್ಚುವರಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ದೂರುಗಳು ಬರುತ್ತಿವೆ. ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ, ತುರ್ತು ಕ್ರಮವಹಿಸಬೇಕು. ಪರಮಿಟ್ ಇಲ್ಲದೇ ಆಟೊ ಓಡಿಸುತ್ತಿದ್ದರೆ, ಅಂತಹ ವಾಹನ ಜಪ್ತಿ ಮಾಡಿ, ಮಾಲೀಕ ಹಾಗೂ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಫ್ರೀ ಪೇಡ್ ಆಟೊ ವ್ಯವಸ್ಥೆ ಮಾಡಲು ಕ್ರಮವಹಿಸಿ, ಜನರಲ್ಲಿ ಸಂಚಾರ ಸುರಕ್ಷತೆ ಹಾಗೂ ಸುರಕ್ಷಿತ ಪ್ರಯಾಣದ ಬಗ್ಗೆ ಅರಿವು ಮೂಡಿಸಿ. ಐಇಸಿ ಚಟುವಟಿಕೆಗಳಿಗೆ ಬರುವ ಅನುದಾನವನ್ನು ಸಮರ್ಪಕವಾಗಿ, ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸರಿಯಾದ ದಾಖಲೆ ಹೊಂದಿರದ ಮತ್ತು ಪರಮೀಟ್ ಇಲ್ಲದೇ ಸಂಚರಿಸುವ ಆಟೊ ಹಾಗೂ ಇತರ ವಾಹನಗಳನ್ನು ಸೀಜ್ ಮಾಡಲು ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತಪಾಸಣಾ ಅಭಿಯಾನ ಮಾಡುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ನಿರ್ದೇಶಿಸಿದರು.