2 ವರ್ಷಕ್ಕೆ 1,770 ಕೋಟಿ ರೂ.: ದಾಖಲೆ ಮೊತ್ತಕ್ಕೆ ಸೌದಿಯ ಅಲ್ ನಾಸರ್ ಕ್ಲಬ್ ಸೇರಿದ ರೊನಾಲ್ಡೊ

ನವದೆಹಲಿ: ಪುಟ್ಬಾಲ್ ಲೋಕದ ಜನಪ್ರಿಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಸೌದಿ ಅರೇಬಿಯಾದ ಅಲ್ ನಾಸರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ದಾಖಲೆ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
37 ವರ್ಷದ ರೊನಾಲ್ಡೊ ಮುಂದಿನ ಎರಡು ವರ್ಷಗಳ ಕಾಲ ಅಲ್-ನಾಸರ್ ಪರವಾಗಿ ಆಡಲಿದ್ದಾರೆ. ಡಿಸೆಂಬರ್ 30ರಂದು ಈ ಒಪ್ಪಂದ ಅಧಿಕೃತವಾಗಿದ್ದು, ರೊನಾಲ್ಡೊ 2 ವರ್ಷಗಳ ಕಾಲ ಅಲ್ ನಾಸರ್ ಪರವಾಗಿ ಆಡಲು, ಬರೋಬ್ಬರಿ 200 ಮಿಲಿಯನ್ ಯೂರೋ (ಸುಮಾರು 1700 ಕೋಟಿ ರೂಪಾಯಿ) ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಅಲ್ ನಾಸರ್ ಕ್ಲಬ್‌ನೊಂದಿಗೆ ರೊನಾಲ್ಡೊ ತಮ್ಮ ಮೆಚ್ಚಿನ ಏಳು ನಂಬರ್ ಜೆರ್ಸಿಯನ್ನು ಹಿಡಿದಿರುವ ಚಿತ್ರವನ್ನು ಅಭಿಮಾನಿಗಳಿಗಾಗಿ ಕ್ಲಬ್ ಹಂಚಿಕೊಂಡಿದೆ. ಜೊತೆಗೆ 'ಇತಿಹಾಸ ರಚನೆಯಾಗಿದೆ. ನಮ್ಮ ಕ್ಲಬ್ ಇನ್ನಷ್ಟು ಯಶಸ್ಸನ್ನು ಸಾಧಿಸಲು ಮತ್ತು ಭವಿಷ್ಯದ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿಯಾಗಲು ರೊನಾಲ್ಡೊ ಅವರೊಂದಿಗಿನ ಒಪ್ಪಂದ ನೆರವಾಗಲಿದೆ' ಎಂದು ಸ್ಟಾರ್ ಆಟಗಾರನಿಗೆ ಸ್ವಾಗತ ಕೋರಿದೆ.
ಸ್ಪ್ಯಾನಿಷ್ ವರದಿಗಳ ಪ್ರಕಾರ, ರೊನಾಲ್ಡೊ ಅಕ್ ನಾಸ್ರ್ ಜೊತೆ 7 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಮೊದಲ 2.5 ವರ್ಷಗಳ ಕಾಲ ಕ್ಲಬ್ ಪರವಾಗಿ ಆಡಲಿದ್ದು, ನಂತರ ರಾಯಬಾರಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ದಿನಗಳಲ್ಲಿ ರೊನಾಲ್ಡೊ ಇನ್ನೂ ಹೆಚ್ಚಿನ ಹಣವನ್ನು ಪಡೆಯುವ ಸಾಧ್ಯತೆ ಇದೆ.