ಚೀನಾದಲ್ಲಿ ಕೋವಿಡ್‌ ಅಬ್ಬರ: ಪ್ರಯಾಣದ ಮೇಲೆ ನಿರ್ಬಂಧ

ಚೀನಾದಲ್ಲಿ ಕೋವಿಡ್‌ ಅಬ್ಬರ: ಪ್ರಯಾಣದ ಮೇಲೆ ನಿರ್ಬಂಧ

ಬೀಜಿಂಗ್‌: ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಆತಂಕ ಮತ್ತಷ್ಟು ಹೆಚ್ಚಾಗಿದೆ. ಲಾಕ್‌ಡೌನ್‌ಗಳು, ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ಮತ್ತು ಪ್ರಯಾಣ ನಿರ್ಬಂಧಗಳೊಂದಿಗೆ ಕೋವಿಡ್ ಹರಡುವಿಕೆಯನ್ನು ತಡೆಯಲು ಚೀನಾ ಸರ್ಕಾರ ಸರ್ವ ಪ್ರಯತ್ನ ನಡೆಸಿದೆ. 

ಚೀನಾದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದಾಖಲೆ ಏರಿಕೆ ಕಾಣುತ್ತಿವೆ. ಬುಧವಾರ ಒಟ್ಟು 31,454 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. 

ಕೋವಿಡ್ ಸೋಂಕು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ನವೆಂಬರ್‌ 18ರಂದು (ಶುಕ್ರವಾರ) ಸರ್ಕಾರ ಸೂಚನೆಗಳನ್ನು ಬಿಡುಗಡೆ ಮಾಡಿತ್ತು. ಹೀಗಾಗಿ ಬೀಜಿಂಗ್‌ ಜನತೆ ಮನೆಯಿಂದ ಹೊರಬರದೇ ಉಳಿದ ಕಾರಣ ನಗರದಲ್ಲಿ ಅರೆ ಲಾಕ್‌ಡೌನ್‌ ವಿಧಿಸಿದ ಪರಿಸ್ಥಿತಿ ಕಂಡುಬಂದಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಹಾಗೂ ವಾರಾಂತ್ಯಗಳಲ್ಲಿ ಪ್ರವಾಸ ಹೋಗದಂತೆ ಜನರಿಗೆ ಸೂಚಿಸಲಾಗಿದೆ. ಚಾವೋಯಂಗ್, ದೋಂಗ್‌ಚಂಗ್, ಕ್ಸಿ ಚೆಂಗ್, ತೋಂಗ್‌ಜೌ, ಯಾಂಕಿಂಗ್, ಚಂಗ್‌ಪಿಂಗ್‌, ಶುನ್ಯಿ ಮತ್ತು ಹೈಡಿಯಾನ್‌ಗಳಲ್ಲಿ ಜನರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. 

ಬೀಜಿಂಗ್‌ ನಗರದಲ್ಲಿರುವ ಶಾಪಿಂಗ್‌ ಮಾಲ್‌ಗಳನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಕುಳಿತು ತಿನ್ನುವ ಸೌಲಭ್ಯವನ್ನು ಸಹ ರದ್ದು ಮಾಡಲಾಗಿದೆ. ಅತಿಹೆಚ್ಚು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋವಿಡ್ ವಿರುದ್ಧ ಚೀನಾ ಹೊಂದಿದ್ದ ತನ್ನ ಶೂನ್ಯ ಸಹಿಷ್ಣುತೆ ನೀತಿಯನ್ನು ಕಳೆದ ವಾರ ಕೆಲ ಮಟ್ಟಿಗೆ ಸಡಿಲಗೊಳಿಸಿತ್ತು.