ಜಲಸಂಪನ್ಮೂಲ ಇಲಾಖೆಯ ಭ್ರಷ್ಟಾಚಾರಕ್ಕೆ ಕಂಗೆಟ್ಟ ಗುತ್ತಿಗೆದಾರರು- ಸಿಎಂಗೆ ದೂರು

ಜಲಸಂಪನ್ಮೂಲ ಇಲಾಖೆಯ ಭ್ರಷ್ಟಾಚಾರಕ್ಕೆ ಕಂಗೆಟ್ಟ ಗುತ್ತಿಗೆದಾರರು- ಸಿಎಂಗೆ ದೂರು

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ. ವಿಜಯಪುರದಿಂದ ಬಂದಿದ್ದ ಐದಕ್ಕೂ ಹೆಚ್ಚು ಗುತ್ತಿಗೆದಾರರ ತಂಡವು, ಜಲಸಂಪನ್ಮೂಲ ಇಲಾಖೆಯಲ್ಲಿ ಗುತ್ತಿಗೆ ಪ್ಯಾಕೇಜ್ ಮಾಡುತ್ತಿರುವ ಆರೋಪ ಮಾಡಿದ್ದಾರೆ. ಬಿರಾದಾರ್ ಎಂಬ ಗುತ್ತಿಗೆದಾರ ತಂಡದಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದ್ದು, ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈಗ ಜಲ ಸಂಪನ್ಮೂಲ ಸಚಿವರು, ಸಣ್ಣ ಕಾಮಗಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು ಇವರು ಎಲ್ಲ ಸಣ್ಣ ಕಾಮಗಾರಿಗಳನ್ನ ಪ್ಯಾಕೇಜ್ ಮಾಡಲು ಆದೇಶಿಸಿರುತ್ತಾರೆ. ಸದರಿ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ ಗಳನ್ನು ಮಾಡಿ ಹಣ ಮಾಡುವ ಉದ್ದೇಶ ಹೊಂದಿರುತ್ತಾರೆ. ಆದ್ದರಿಂದ ಈಗ ಪ್ಯಾಕೇಜ್ ಪದ್ದತಿ ರದ್ದು ಮಾಡಿ ನಮ್ಮಂತಹ ಸಣ್ಣ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಪ್ಯಾಕೇಜ್ ಪದ್ಧತಿಯನ್ನು ರದ್ದುಪಡಿಸದೇ ಹೋದಲ್ಲಿ ನೊಂದ ಗುತ್ತಿಗೆದಾರರು ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು, ಆ ಸಮಯದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾವೇ ಹೊಣೆಗಾರರು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.