ಧಾರವಾಡ ಡಿಸಿ ಜೊತೆ ಸಿಎಂ ವಿಡಿಯೋ ಸಂವಾದ: ಕುಡಿಯುವ ನೀರಿಗೆ ಆದ್ಯತೆ ಕೊಡಲು ಸೂಚನೆ

ಧಾರವಾಡ ಡಿಸಿ ಜೊತೆ ಸಿಎಂ ವಿಡಿಯೋ ಸಂವಾದ: ಕುಡಿಯುವ ನೀರಿಗೆ ಆದ್ಯತೆ ಕೊಡಲು ಸೂಚನೆ

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿಗಳು ಸಹ ಈ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. 

ಕರ್ನಾಟಕದಲ್ಲಿ ಈ ಸಲ ದೊಡ್ಡ ಪ್ರಮಾಣದ ಬರ ಇದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದರು. 

ಕರ್ನಾಟಕದಲ್ಲಿ ಪ್ರಖರವಾದ ಬರಗಾಲ ಪರಿಸ್ಥಿತಿ ಕಾಣುತ್ತಿದೆ. ಮುಂಗಾರು ಮಳೆ ವಿಫಲವಾಗಿ, ರೈತರು ಬೆಳೆದಿದ್ದ ಸುಮಾರು 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಇನ್ನೂ ಮಾರ್ಚ, ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಎದುರಿಸಬೇಕು. ಮೈಸೂರು ಭಾಗದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ಪೂರ್ವ ಮಳೆ ಬರುವ ಸಾಧ್ಯತೆ ಇದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಬರುತ್ತದೆ ಎಂಬ ನಿರೀಕ್ಷೆ ಇಲ್ಲ. ಅದಕ್ಕಾಗಿ ಅಧಿಕಾರಿಗಳು ಈಗಿನ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಮುಂದಿನ ಪರಿಸ್ಥಿಯನ್ನು ಸಮಸ್ಯೆಗಳಿಲ್ಲದೇ ನಿಭಾಯಿಸಲು ಎರಡು ಪ್ರಕಾರದ ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಬೇಕೆಂದು ಅವರು ಸೂಚಿಸಿದರು. 

ಜನರಿಗೆ ತೊಂದರೆ ಆದರೆ ಆಯಾ ಜಿಲ್ಲೆಯ ಡಿಸಿ,ಎಸಿ ಮತ್ತು ತಹಶೀಲ್ದಾರರನ್ನು ಜವಾಬ್ದಾರರನ್ನಾಗಿ ಮಾಡುತ್ತೇನೆ. ಅವರು ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಕೊರತೆ ಆಗಬಾರದು. ಜನ ಕೆಲಸ ಸಿಕ್ಕಿಲ್ಲ ಅಂತಾ ಗುಳೆ ಹೋಗಬಾರದು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು, ಸಿಇಓಗಳು ತಮ್ಮ ಜಿಲ್ಲೆಯ ತಹಶೀಲ್ದಾರ, ಆರ್‌ಐ, ವಿ.ಎ ಮತ್ತು ಪಿಡಿಓ ಗಳ ಜೊತೆ ಸಭೆ ಜರುಗಿಸಬೇಕು. ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು. 

ಹೊಸದಾಗಿ ಬೋರವೆಲ್ ಕೊರೆಸಲು ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ 2 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸಂವಾದದಲ್ಲಿ ತಿಳಿಸಿದರು.