ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರು - ಶಾಸಕರೊಂದಿಗೆ ಸಿಎಂ ಸಭೆ

ಬೆಂಗಳೂರು : ದೆಹಲಿ ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಗೃಹಕಚೇರಿ ಕೃಷ್ಣಾ ದಲ್ಲಿ ವಿಶೇಷ ಸಭೆ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ 11 ಕ್ಕೆ ಸಭೆ ಆರಂಭಿಸಿದ ಸಿಎಂ ಅವರು ಮೊದಲಿಗೆ ಯಾದಗಿರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಶಾಸಕರ ಅಹವಾಲುಗಳನ್ನು ಆಲಿಸಿದರು. ಬಳಿಕ ಮಧ್ಯಾಹ್ನದ ವೇಳೆ ಸಂವಾದವನ್ನು ಮುಂದುವರಿಸಿದ ಅವರು, ಶಾಸಕರ ಅಸಮಾಧಾನ ಶಮನ ಮಾಡಲು ಯತ್ನಿಸಿದರೆಂದು ತಿಳಿದು ಬಂದಿದೆ.
ಆದರೆ, ವರ್ಗಾವಣೆ ದಂಧೆ, ಶಾಸಕರ ಕೆಲಸಗಳಿಗೆ ಅಸಡ್ಡೆ ತೋರುವ ಸಚಿವರ ವರ್ತನೆ, ಶಾಸಕರು ಮತ್ತು ಸಚಿವರ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುವಂತಿತ್ತು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲ ಸಚಿವರನ್ನು ಬೇಕು ಅಂತಲೇ ಈ ಸಭೆಯಿಂದ ದೂರ ಇರುವಂತೆ ಹೇಳಿದ್ದರೆಂದೂ ಸಿಎಂ ಆಪ್ತ ಮೂಲಗಳು ತಿಳಿಸಿವೆ. ನಾಳಿನ ಸಭೆಯಲ್ಲಿ ಇನ್ನುಳಿಸ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.