ಉದ್ಯಮಿ ಪಿಯೂಶ್ ಜೈನ್ ಬಂಧನ: ಮನೆಯಲ್ಲಿತ್ತು 250ಕೋಟಿ ನಗದು

ಉದ್ಯಮಿ ಪಿಯೂಶ್ ಜೈನ್ ಬಂಧನ: ಮನೆಯಲ್ಲಿತ್ತು 250ಕೋಟಿ ನಗದು

ಲಖನೌ: ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಉದ್ಯಮಿ ಪಿಯೂಷ್ ಜೈನ್‌ರನ್ನು ಇಂದು ಬಂಧಿಸಲಾಗಿದೆ. ಇವರ ಮನೆ ಹಾಗೂ ಕಾರ್ಖಾನೆಯಲ್ಲಿ ಜಾಲಾಡಿದಾಗ ಸ್ವತಃ ಜಿಎಸ್‌ಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ‌. ಕಾರಣ ಶೋಧ ಕಾರ್ಯಾಚರಣೆ ವೇಳೆ ಮನೆ ಹಾಗೂ ಕಾರ್ಖಾನೆಯಲ್ಲಿ ಬರೋಬ್ಬರಿ 250 ಕೋಟಿ ಕ್ಯಾಶ್ ಸಿಕ್ಕಿದೆ. ಹಾಗಾದ್ರೆ ಇಷ್ಟೊಂದು ಹಣ ಎಲ್ಲಿಂದ ಬಂತು? ಅನ್ನೋದೇ ಈಗ ಎದ್ದಿರುವ ಪ್ರಶ್ನೆ. ಈ ದಾಳಿಗೆ ಸಂಬಂಧಿಸಿದ ಕೆಲವು ಫೋಟೋಗಳು ವೈರಲ್ ಆಗಿದ್ದವು. ಇದರಲ್ಲಿ ದೊಡ್ಡ ದೊಡ್ಡ ನೋಟಿನ ಕಂತೆಗಳನ್ನು ಪ್ಲಾಸ್ಟಿಕ್‌ನಲ್ಲು ಕಟ್ಟಿ ಅದಕ್ಕೆ ಹಳದಿ ಪಟ್ಟಿ ಸುತ್ತಲಾಗಿತ್ತು. ಹಾಗೂ ವಾರ್ಡ್ ರೋಬ್‌ನಲ್ಲಿ ಭದ್ರವಾಗಿ ಇರಿಸಲಾಗಿತ್ತು. ಮತ್ತು ಇನ್ನೊಂದು ಫೋಟೋದಲ್ಲಿ ಅಧಿಕಾರಿಗಳು ನೋಟು ಎಣಿಸುತ್ತ ಕುಳಿತಿದ್ದು ಸುತ್ತ ನೋಟಿನ ರಾಶಿ ಹಾಗೂ ಎಣಿಕೆ ಮಶೀನ್ ಇರುವುದು ಕಂಡು ಬಂದಿತ್ತು. ಇದೆಲ್ಲ ತಂದೆಯಿಂದ ಕಲಿತಿದ್ದು... ಉದ್ಯಮಿ ಪಿಯೂಷ್ ಜೈನ್, ಸುಗಂಧ ದ್ರವ್ಯ ಹಾಗೂ ಖಾದ್ಯ ತಯಾರಿಕೆ ಉದ್ಯಮ ನಡೆಸಿತ್ತಿದ್ದರು‌. ಇದೆಲ್ಲವನ್ನು ತಮ್ಮ‌ ತಂದೆಯಿಂದ ಕಲಿತ ಪಿಯೂಷ್ ಕಾನ್ಪುರದಲ್ಲಿ ಅದೇ ಬ್ಯುಸಿನೆಸ್ ಆರಂಭಿಸಿದರು. 15ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಂಪನಿ ಸ್ಥಾಪಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಪಿಯೂಷ್ ಜೈನ್ ಸಾಮಾನ್ಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರಂತೆ. ಹೀಗಾಗಿ ಜನ 'ಇದು‌ ಅವರ ಸರಳತೆ' ಎಂದು ಹೇಳ್ತಿದ್ದರಂತೆ‌. ಸದ್ಯ ಮನೆ ಜಾಲಾಡಿದಾಗ ಹಣದ ಜೊತೆಗೆ ಚಿನ್ನ, ಬೆಳ್ಳಿ, ಲೆಕ್ಕವಿಲ್ಲದಷ್ಟು ಗಂಧದ ಎಣ್ಣೆ ಮತ್ತು ಭಾರೀ ಪ್ರಮಾಣದ ಸುಗಂಧ ದ್ರವ್ಯವನ್ನು ಜಿಎಸ್‌ಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.