ಸೆ. 1ರಿಂದ ನ. 14ರವರೆಗೆ ಹಂತ ಹಂತಗಳಲ್ಲಿ ಶಾಲಾ- ಕಾಲೇಜು ಆರಂಭಿಸಲು ಸಿದ್ಧತೆ: ಪಾಲಿಸಬೇಕಾದ ನಿಯಮಗಳೇನು..?

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಮರು ಆರಂಭಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿ ಸಿದ್ಧಪಡಿಸಿದೆ. ಸೆಪ್ಟೆಂಬರ್ 1ರಿಂದ ನವೆಂಬರ್ 14ರವರೆಗೆ ಹಂತ ಹಂತಗಳಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ಆ. 31ರ ನಂತರ ರಾಜ್ಯಗಳಿಗೆ ಸೂಚಿಸಲಾಗುವ ಅನ್ ಲಾಕ್ 4.0 ಮಾರ್ಗಸೂಚಿಯನ್ವಯ ಇದನ್ನು ಮಾರ್ಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರಗಳ ತೀರ್ಮಾನವೇ ಅಂತಿಮವಾಗಿರಲಿದೆ. ಯಾವಾಗ ಮತ್ತು ಹೇಗೆ ಮಕ್ಕಳನ್ನು ತರಗತಿಗಳಿಗೆ ಕರೆತರಬೇಕು ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ಕೈಗೊಳ್ಳಲಿವೆ. ಕೇಂದ್ರದಿಂದ ಅನುಮತಿ ನೀಡುವುದು ಅಥವಾ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ. ಇದಕ್ಕೆ ಕೇಂದ್ರದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ಪಾಲಿಸಬೇಕಾಗುತ್ತದೆ.
ಶಾಲಾ-ಕಾಲಾಜುಗಳ ಆರಂಭಕ್ಕೆ ಪಾಲಿಸಬೇಕಾದ ಮಾರ್ಗಸೂಚಿಗಳು ಹೀಗಿವೆ…
- ಹಂತ ಹಂತವಾಗಿ ಶಾಲಾರಂಭಕ್ಕೆ ಯೋಜಿಸಲಾಗಿದೆ. ಮೊದಲ 15 ದಿನ 10-12ನೇ ತರಗತಿ ವಿದ್ಯಾರ್ಥಿಗಳು ಕ್ಲಾಸ್ಗೆ ಹಾಜರಾಗಲಿದ್ದಾರೆ.
- ಒಂದೊಂದು ತರಗತಿ ವಿದ್ಯಾರ್ಥಿಗಳು ನಿಗದಿತ ದಿನದಂದು ಶಾಲೆಗೆ ಹಾಜರಾಗಲಿದ್ದಾರೆ. ಅದರಲ್ಲೂ ಆಯಾ ಸೆಕ್ಷನ್ನ ಅರ್ಧದಷ್ಟು ವಿದ್ಯಾರ್ಥಿಗಳಷ್ಟೇ ಶಾಲೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.
- ಶಿಫ್ಟ್ನಲ್ಲಿ ತರಗತಿ: ಹಿಂದಿನಂತೆ ಪೂರ್ಣ ಅವಧಿಗೆ ಶಾಲೆ- ಕಾಲೇಜುಗಳು ತೆರೆದಿರುವುದಿಲ್ಲ. ವಿದ್ಯಾರ್ಥಿಗಳು 5-6 ತಾಸಿನ ಬದಲು 2-3 ತಾಸಷ್ಟೇ ಶಾಲೆಯಲ್ಲಿರಬೇಕು. ಅದರಲ್ಲೂ ಶಾಲೆಗಳು ಶಿಫ್ಟ್ನಲ್ಲಿ ಕಾರ್ಯ ನಿರ್ವಹಿಸಲಿವೆ. ಅಂದರೆ, ಬೆಳಗ್ಗೆ 8ರಿಂದ 11 ಗಂಟೆಗೆ ಒಂದು ಶಿಫ್ಟ್, ಮಧ್ಯಾಹ್ನ 12-3 ಗಂಟೆ ಮತ್ತೊಂದು ಶಿಫ್ಟ್ ಇರಲಿದೆ.
- ಈ ನಡುವೆ ಮಧ್ಯಾಹ್ನದ ಊಟದ ಅವಧಿಯಲ್ಲಿ ಒಂದು ತಾಸು ಶಾಲೆಯಲ್ಲಿ ಸ್ಯಾನಿಟೈಸ್ ಮಾಡಬೇಕಾಗುತ್ತದೆ. ಪ್ರತಿದಿನ ಒಟ್ಟು ಬೋಧಕರ ಪೈಕಿ ಶೇ.33 ಶಿಕ್ಷಕರನ್ನಷ್ಟೇ ಬಳಸಿಕೊಳ್ಳಬಹುದು. ಇಷ್ಟೇ ಪ್ರಮಾಣದ ವಿದ್ಯಾರ್ಥಿಗಳನ್ನು ಶಾಲೆಗೆ ಹಾಜರಾಗಲು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
- ಪ್ರಾಥಮಿಕ- ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. 10-12ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವುದು ಆರಂಭವಾದ ನಂತರ 6- 9ನೇ ಕ್ಲಾಸ್ ಮಕ್ಕಳಿಗೆ ಅವಕಾಶವಿರಲಿದೆ. ಒಂದು ವೇಳೆ ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆಗಳು ಒಟ್ಟಿಗೆ ಇದ್ದರೆ, ಪ್ರಾಥಮಿಕ ಶಾಲೆ ಕೊಠಡಿಗಳನ್ನು ಪ್ರೌಢಶಾಲೆ ಮ್ಕಕಳಿಗಾಗಿ ಬಳಸಿಕೊಳ್ಳಬಹುದು.