ಪ್ರಧಾನಿ ಮೋದಿ ಭೇಟಿಯಾದ ಯಡಿಯೂರಪ್ಪ ಪುತ್ರರು - ರಾಘವೇಂದ್ರ ಪುತ್ರನ ವಿವಾಹಕ್ಕೆ ಆಮಂತ್ರಣ

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದು, ಜೂನ್ ನಲ್ಲಿ ನಡೆಯುವ ಕುಟುಂಬದ ಮದುವೆಗೆ ಆಹ್ವಾನ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರ ರಾಘವೇಂದ್ರ ಅವರ ಮಗ ಸುಭಾಷ್ ಮತ್ತು ಶ್ರಾವಣಾ ವಿವಾಹ ಜೂನ್ ನಲ್ಲಿ ನಿಗದಿಯಾಗಿದೆ. ಇಬ್ಬರ ನಿಶ್ಚಿತಾರ್ಥ ಸೋಮವಾರ ಕಲಬುರಗಿಯ ಖಾಸಗಿ ನಡೆದಿತ್ತು. ಇದೀಗ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ನೀಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿಜಯೇಂದ್ರ ಅವರು, 'ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ನವದೆಹಲಿಯಲ್ಲಿಂದು ಭೇಟಿಯಾಗಿ ನಮ್ಮ ಕುಟುಂಬದ ವಿವಾಹ ಮಹೋತ್ಸವಕ್ಕೆ ಪ್ರೀತಿ ಹಾಗೂ ಅಭಿಮಾನ ಪೂರ್ವಕವಾಗಿ ಆಹ್ವಾನಿಸಿದೆವು. ವಿಕಸಿತ ಭಾರತದ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಪ್ರಧಾನಿ ಮೋದಿ ಅವರು ನಮ್ಮಂತಹ ಕಾರ್ಯಕರ್ತರಿಗೆ ಯುಕ್ತ ಚೈತನ್ಯದ ಪ್ರೇರಣೆಯ ವ್ಯಕ್ತಿಯಾಗಿದ್ದಾರೆ. ಅವರ ಮಾರ್ಗದರ್ಶನ ಆಶೀರ್ವಾದ ಅದಮ್ಯ ಉತ್ಸಾಹ ತುಂಬಲಿದೆ' ಎಂದು ತಿಳಿಸಿದ್ದಾರೆ.