ವಿಜಯೇಂದ್ರ ನೇತೃತ್ವದ ಸಭೆಗೆ ಯತ್ನಾಳ್ ಸೇರಿ ಹಲವರ ಗೈರು!
ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸಲೆಂದು ಬಿಜೆಪಿಯ ಹಿರಿಯ ಕಿರಿಯ ನಾಯಕರೆಲ್ಲ ಒಂದೆಡೆ ಸೇರಿ ಚರ್ಚೆ ನಡೆಸುತ್ತಿದ್ದು, ಈ ಮಹತ್ವದ ಸಭೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿದಂತೆ ಮತ್ತೆ ಕೆಲವರು ಗೈರಾಗುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಂದ ಅಂತರವನ್ನು ಕಾಯ್ದುಕೊಂಡಿರೋದು ಮೇಲ್ನೋಟಕ್ಕೆ ಎದ್ದು ಕಾಣುವಂತಾಗಿದೆ.
ಈ ಬಗ್ಗೆ ಕೇಳಿದಾಗ ಬಿಜೆಪಿ ಪಕ್ಷದ ವಕ್ತಾರರು ಹೇಳೋದೇ ಬೇರೆ. ಶಾಸಕ ಯತ್ನಾಳ್ ಅವರಾಗಲಿ ಅರವಿಂದ್ ಬೆಲ್ಲದ್ ಅವರ ಗೈರು ಹಾಜರಿಯ ಪ್ರಶ್ನೆ ಇಲ್ಲಿ ಬರಲ್ಲ. ಏಕೆಂದರೆ, ಇದು ವಲಯವಾರು ಮುಖಂಡರೊಂದಿಗಿನ ಸಭೆಯಾಗಿದೆ ಅಂತಾರೆ.
ಅಂದಹಾಗೆ ಇಂದು ನಗರದ ಹೋಟೆಲ್ ರಮಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆ 2024ರ ಬಿಜೆಪಿ ಸಿದ್ಧತಾ ಸಭೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್,ಮಾಜಿ ಸಚಿವರಾದ ಸಿ.ಟಿ.ರವಿ, ಸುನೀಲ್‍ಕುಮಾರ್ ಹಾಗೂ ಆಹ್ವಾನಿತರು ಭಾಗವಹಿಸಿರೋದು ಕಂಡು ಬಂದಿದೆ.