ಅ.10 ರವರೆಗೂ ಮಳೆ ಮುಂದುವರಿಕೆ ಸಾಧ್ಯತೆ…

ಬೆಂಗಳೂರು: ರಾಜ್ಯಾದ್ಯಂತ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ತುಸು ಜೋರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆ ಇಂದು ಮುಂಜಾನೆವರೆಗೂ ಮುಂದುವರೆಯಿತು. ಇದರಿಂದ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ತುಂಬಿದೆ. ನಗರದ ಬಸವನಗುಡಿ, ಮಲ್ಲೇಶ್ವರಂ, ರಾಜಾಜಿನಗರ, ಆರ್ಆರ್ ನಗರ, ಹೆಬ್ಬಾಳ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನದಿಯಂತಾದ ರಸ್ತೆಗಳಲ್ಲಿ ಸಂಚರಿಸಲಾಗದೆ ವಾಹನ ಸವಾರರು ಪರದಾಡುವಂತ್ತಾಗಿದೆ. ಇಂದು ಬೆಳಗ್ಗೆ ಕೊಂಚ ಬ್ರೇಕ್ ಕೊಟ್ಟಿದ್ದ ವರುಣ ಸಂಜೆ ಹೊತ್ತಿಗೆ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಮನೆ, ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದೆ. ಮರಗಳು ಧರೆಗುರುಳಿವೆ. ಇನ್ನು ಹವಾಮಾನ ಇಲಾಖೆ ಅಕ್ಟೋಬರ್ 10ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಭಾರತದ ಕಡೆ ಮೇಲ್ಮೈ ಸುಳಿಗಾಳಿ ಹಾಗೂ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ 4 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾಕೃತಿಕ ಮತ್ತು ನೈಸರ್ಗಿಕ ವಿಕೋಪ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.