ಬಂಗಾರಮಯ ಶ್ರೀರಾಮ ಮಂದಿರ!- 42 ದ್ವಾರಗಳಿಗೆ ಸ್ವರ್ಣ ಲೇಪನ, 100 ಕೆಜಿ ಚಿನ್ನ ಬಳಕೆ

ಅಯೋಧ್ಯೆ: ಭಕ್ತಿಯ ಸೆಲೆಯನ್ನು ಚಿಮ್ಮುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ ಚಿನ್ನದ ಹೊಳಪು ಬಂದಿದೆ. ಶತಮಾನಗಳ ಕನಸು ಸಾಕಾರವಾಗಿ ನಾಗರಶೈಲಿಯಲ್ಲಿ ನಿರ್ಮಾಣಗೊಂಡಿರುವ ಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ. ಇಲ್ಲಿನ ಕೆತ್ತನೆಯ ಕಲಾಕುಸುರಿ, ವಿಗ್ರಹಗಳು, ವಿವಿಧ ದೇವರ ಗುಡಿಗಳು ಭಕ್ತಿಯ ಸೋಪಾನವನ್ನೇ ಹಾಸಿವೆ.
ಮಂದಿರದ ಭವ್ಯತೆಗೆ ಕಳಶವಿಟ್ಟಂತೆ ಗರ್ಭಗುಡಿ ಸೇರಿದಂತೆ ಎಲ್ಲ ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಇದಕ್ಕಾಗಿ 100 ಕೆ.ಜಿ. ಬಂಗಾರವನ್ನು ಬಳಸಿಕೊಳ್ಳಲಾಗಿದೆ. ಗರ್ಭಗುಡಿಗೆ 12 ಅಡಿ ಎತ್ತರ, 8 ಅಡಿ ಅಗಲದ ಮೊದಲ ಚಿನ್ನದ ದ್ವಾರವನ್ನು ಅಳವಡಿಸಲಾಗಿದೆ. ಇದು ದಿವ್ಯ ದೇಗುಲದ ಮೆರುಗು ಹೆಚ್ಚಿಸಿದೆ.
ಶ್ರೀರಾಮ ಮಂದಿರದಲ್ಲಿ ಒಟ್ಟು 46 ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ 42 ಚಿನ್ನದ ಲೇಪನ ಹೊಂದಿರಲಿವೆ. ಈಗಾಗಲೇ ಮೊದಲ ಬಂಗಾರದ ಬಾಗಿಲನ್ನು ಅಳವಡಿಸಲಾಗಿದೆ. ಇನ್ನು ಮೂರು ದಿನಗಳಲ್ಲಿ 13 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.