ಹುಬ್ಬಳ್ಳಿ, ಬೆಳಗಾವಿಯ ವಿಮಾನ ನಿಲ್ದಾಣಗಳನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ - ಎಂ ಬಿ ಪಾಟೀಲ್

ಹುಬ್ಬಳ್ಳಿ, ಬೆಳಗಾವಿಯ ವಿಮಾನ ನಿಲ್ದಾಣಗಳನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ - ಎಂ ಬಿ ಪಾಟೀಲ್

ಬೆಂಗಳೂರು: ಕಲ್ಬುರ್ಗಿ ಸೇರಿದಂತೆ ರಾಜ್ಯದ ಎರಡನೇ ಹಂತದ ಆರು ನಗರಗಳಿಗೆ ವಿಮಾನಯಾನ ಸೇವೆಯನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಇಂದು ಬೆಂಗಳೂರಿನ ಖನಿಜ ಭವನದಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. 

ಸಭೆಯಲ್ಲಿ ಕಲ್ಬುರ್ಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಜಿಂದಾಲ್ ಟೌನ್ ಶಿಪ್) ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಗಳಿಂದ ರಾಜ್ಯ ಸೇರಿದಂತೆ ಇತರ ರಾಜ್ಯಗಳಿಗೆ ವಿಮಾನಯಾನ‌ ಸಂಪರ್ಕ ಹೆಚ್ಚಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. 

ಸಭೆಯಲ್ಲಿ ಸಚಿವ ಪ್ರೀಯಾಂಕ್ ಖರ್ಗೆ, ಇಂಡಿಗೋ, ಸ್ಟಾರ್ ಏರ್, ಏರ್ ಇಂಡಿಯಾ, ಆಕಾಶ್, ಅಲೈಯನ್ಸ್ ಏರ್ ವೇಸ್, ಸ್ಪೈಸ್ ಜೆಟ್ ಸೇರಿದಂತೆ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 

ವಿಮಾನ ಸಂಚಾರಕ್ಕೆ ಕಲ್ಬುರ್ಗಿ ಹೆಚ್ಚು ಲಾಭದಾಯಕ ಮಾರ್ಗವಾಗಿದ್ದರೂ ಅಲ್ಲಿಗೆ ಬೆಂಗಳೂರಿನಿಂದ ವಾರಕ್ಕೆ ಕೇವಲ ಮೂರು ದಿನ ಮಾತ್ರ ವಿಮಾನ ಸಂಚಾರ ಇದೆ. ಇದನ್ನ ಮತ್ತಷ್ಟು ಹೆಚ್ಚಿಸಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ‌ ನಗರ ಹಾಗೂ ಅನ್ಯ ರಾಜ್ಯಗಳ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಇಬ್ಬರೂ ಸಚಿವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. 

ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ಜು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಸಚಿವ ಎಂ. ಬಿ. ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಇವೆರಡೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಲು ಅರ್ಹತೆ ಪಡೆದಿವೆ. ಪ್ರಯಾಣಿಕರ ದಟ್ಟಣೆ ಕೂಡ ಇದೆ. ಸದ್ಯ‌ ಈ ಭಾಗದವರು ವಿದೇಶಕ್ಕೆ ಹೋಗಬೇಕಾದರೆ ಸಮೀಪ ಅಂದ್ರೆ ಗೋವಾಕ್ಕೆ ಹೋಗಬೇಕು. ಅದರ ಬದಲು ಈ ನಿಲ್ದಾಣಗಳನ್ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಬೇಕು ಎಂದು ಹೇಳಿದರು.