ಹುಬ್ಬಳ್ಳಿಯ ಪಿಸಿಐಟಿ ಕಚೇರಿ ಪಣಜಿಗೆ ಸ್ಥಳಾಂತರಿಸದಂತೆ ಬಸವರಾಜ ಹೊರಟ್ಟಿ ಮನವಿ

ಹುಬ್ಬಳ್ಳಿಯ ಪಿಸಿಐಟಿ ಕಚೇರಿ ಪಣಜಿಗೆ ಸ್ಥಳಾಂತರಿಸದಂತೆ ಬಸವರಾಜ ಹೊರಟ್ಟಿ ಮನವಿ

ಹುಬ್ಬಳ್ಳಿ : ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿ (ಪಿಸಿಐಟಿ)ಯನ್ನು ಪಣಜಿ (ಗೋವಾ)ಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಆದೇಶಿಸಿದ್ದು, ಈ ಆದೇಶವನ್ನು ರದ್ದುಪಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಿದ್ದಾರೆ. 

ಹುಬ್ಬಳ್ಳಿಯ ಪಿಸಿಐಟಿ ಕಚೇರಿಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಡಾವಣಗೆರೆ, ಬಳ್ಳಾರಿ, ಗದಗ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಾಗಲಕೋಟ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. 

ತೆರಿಗೆ ಸಂಬಂಧದ ಅಹವಾಲುಗಳಿಗೆ ಈ ಎಲ್ಲ ಜಿಲ್ಲೆಗಳ ಜನತೆ ಪಣಜಿಗೆ ಹೋಗಬೇಕಾಗುತ್ತದೆ. 

ಆದ್ದರಿಂದ ಕಚೇರಿ ಸ್ಥಳಾಂತರದ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಕೇಳಿಕೊಂಡಿದ್ದಾರೆ. 

ತೆರಿಗೆ ಆದಾಯ ಸಂಗ್ರಹದಲ್ಲಿ ದೆಹಲಿ, ಮಹಾರಾಷ್ಟ್ರ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 

2018-19ರಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ 1,19,796 ಕೋಟಿ ರೂಪಾಯಿ ಸಂದಾಯವಾಗಿದೆ. 

ಹೀಗಿರುವಾಗ ಕರ್ನಾಟಕದ ಜನತೆಗೆ ಅನುಕೂಲ ಮಾಡಿಕೊಡುವ ಬದಲು ಕಚೇರಿಯನ್ನು ಸ್ಥಳಾಂತರ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. 

ಕರ್ನಾಟಕ ಜನತೆ ಹಿತದೃಷ್ಟಿಯಿಂದ ಹುಬ್ಬಳ್ಳಿಯಲ್ಲಿಯೇ ಮುಂದುವರೆಸುವಂತೆ ಕ್ರಮ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.