ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಳಗಾವಿ ಭುಗಿಲೆದ್ದ ಹೋರಾಟ: ಶಾಂತಿ ಸುವ್ಯವಸ್ಥೆಗೆ ಸಿಎಂ ಕರೆ

ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಳಗಾವಿ ಭುಗಿಲೆದ್ದ ಹೋರಾಟ: ಶಾಂತಿ ಸುವ್ಯವಸ್ಥೆಗೆ ಸಿಎಂ ಕರೆ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿಚಾರಕ್ಕೆ ಬೆಳಗಾವಿಯಲ್ಲಿ ಹೋರಾಟ ಭುಗಿಲೆದ್ದಿದೆ. ಮಧ್ಯರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನಿಸಿದ ಘಟನೆಯೂ ನಡೆದಿದೆ. 

 

ಇದೇ ವಿಚಾರವಾಗಿ ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೆ ಕಲ್ಲು ತೂರಿದ ಎಂಇಎಸ್ ಕಾರ್ಯಕರ್ತರ ಮೇಲೆ ನಗರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸ್ಥಳಕ್ಕೆ ನಿರ್ಮಾಣವಾಗಿದ್ದು, ಒಂದು ಸಿಎಆರ್, ಡಿಎಆರ್ ತುಕಡಿ ಆಗಮಿಸಿದೆ. 

 

ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ಬಳಿಕ ವಿಜಯೋತ್ಸವ ನಡೆಸಲು ಬೈಕ್ rally ಮೂಲಕ ತೆರಳುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ಕನ್ನಡ ಸಂಘಟನೆ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಹತೋಟಿಗೆ ತರಲು ಎಂಇಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು. 

 

ಬೆಳಗಾವಿಯ ಪೀರನವಾಡಿಯಲ್ಲಿ ಇದೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳು ತೂರಿದ ಕಲ್ಲುಗಳು ಕೆಲ ಪೊಲೀಸ್ ಸಿಬ್ಬಂದಿಗೂ ತಾಗಿದೆ. ಮೊದಲು ಬೈಕ್ ರ್ಯಾಲಿ ನಡೆಸಲು ಮುಂದಾದ ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೂ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. 

 

ಈ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಲಹೆ ನೀಡುತ್ತೇನೆ ಎಂದಿದ್ದಾರೆ. 

 

ರಾಯಣ್ಣ ಪ್ರತಿಮೆ ತೆರವುಗೊಳಿಸುವದಕ್ಕೆ ಎಂಇಎಸ್ ಅವರು ಯತ್ನ ಮಾಡುತ್ತಿದ್ದಾರೆ. ಎಂಇಎಸ್ ಶಿವಾಜಿಗೆ ಎಷ್ಟು ಪ್ರಾಮುಖ್ಯ ನೀಡುತ್ತದೋ ಅಷ್ಟೇ ಪ್ರಾಮುಖ್ಯ ರಾಯಣ್ಣಗೆ ಕೊಡಬೇಕು. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿದರೆ ಕನ್ನಡ ರಕ್ಷಣಾ ವೇದಿಕೆ ಕೈಕಟ್ಟಿ ಕೂರಲ್ಲ. ಎಂಇಎಸ್ ಪುಂಡಾಟ ಮುಂದುವರಿದರೆ, ರಾಯಣ್ಣ ಪ್ರತಿಮೆಗೆ ಅವಮಾನ ಆದರೆ ಕರ್ನಾಟಕ ಬಂದ್ ಮಾಡುತ್ತೇವೆ. ರಾಯಣ್ಣ ಪ್ರತಿಮೆಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.