ಉರ್ದು ಶಾಲೆಗಳಲ್ಲಿ ಶುಕ್ರವಾರ ಬ್ಯಾಗ್ ರಹಿತ ದಿನ - ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲ ಉರ್ದು ಶಾಲೆಗಳಲ್ಲಿಯೂ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚನೆ ನೀಡಿದೆ.
ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳಿನ ಮೂರನೇ ಶನಿವಾರದಂದು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.
ಉರ್ದು ಶಾಲೆಗಳಲ್ಲಿ ಶುಕ್ರವಾರ ಅರ್ಧ ದಿನ ಹಾಗೂ ಶನಿವಾರ ಪೂರ್ಣ ದಿನದ ತರಗತಿಗಳು ನಡೆಯುತ್ತವೆ. ಹೀಗಾಗಿ 'ಸಂಭ್ರಮ ಶನಿವಾರ'ವನ್ನು ಶುಕ್ರವಾರ ಅಥವಾ ಶನಿವಾರ ಆಚರಿಸುವ ಕುರಿತು ಉರ್ದು ಶಾಲೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆ 'ಶುಕ್ರವಾರ ಬ್ಯಾಗ್ ರಹಿತ ದಿನ'ವನ್ನಾಗಿ ಆಚರಿಸಲು ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ ನಿರ್ದೇಶನ ನೀಡಿದ್ದಾರೆ.