ನಾಳೆ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಅತಿಶಿ ಮರ್ಲೆನಾ ಅವರು ನಾಳೆ (ಶನಿವಾರ, ಸೆಪ್ಟೆಂಬರ್ 20ರಂದು) ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಎಎಪಿ ದೃಢಪಡಿಸಿದೆ.
ಅತಿಶಿ ಅವರು ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಲಿದ್ದಾರೆ. ರಾಷ್ಟ್ರ ರಾಜಧಾನಿಯ ಎಲ್ಲಾ ಹಾಲಿ ಕೌನ್ಸಿಲ್ ಮಂತ್ರಿಗಳನ್ನು ಉಳಿಸಿಕೊಳ್ಳಲಾಗುವುದು ಮತ್ತು ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಅರವಿಂದ್ ಕೇಜ್ರಿವಾಲ್ ಸೆಪ್ಟೆಂಬರ್ 17 ರಂದು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು, ನಂತರ ಅತಿಶಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಅತಿಶಿ ಅವರು 1981ರ ಜೂನ್ 8ರಂದು ದೆಹಲಿಯ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದವರು. ತಾಯಿ ತೃಪ್ತಾ ವಾಹಿ ಹಾಗೂ ತಂದೆ ವಿಜಯ್ ಸಿಂಗ್ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಅತಿಶಿ ಅವರು ಪ್ರವೀಣ್ ಸಿಂಗ್ ಅವರನ್ನು ವರಿಸಿದ್ದಾರೆ. ಅವರೂ ಶಿಕ್ಷಣ ತಜ್ಞ ಹಾಗೂ ಸಂಶೋಧಕ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಲವು ವರ್ಷಗಳಿಂದ ಈ ಜೋಡಿ ಜತೆಗೂಡಿ ಕೆಲಸ ಮಾಡಿದೆ.
ತಾವು ನಂಬಿಕೊಂಡು ಬಂದ ಸಿದ್ಧಾಂತದಿಂದಾಗಿ ಅತಿಶಿ ಅವರು ತಮ್ಮ ಮಧ್ಯದ ಹೆಸರನ್ನು ‘ಮರ್ಲೆನಾ’ ಎಂದು ಇಟ್ಟುಕೊಂಡಿದ್ದಾರೆ. ಇದು ಮಾರ್ಕ್ಸ್ ಹಾಗೂ ಲೆನಿನ್ ಹೆಸರುಗಳನ್ನು ಸೂಚಿಸುತ್ತದೆ. ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ರಾಜಕೀಯಕ್ಕೆ ಧುಮುಕುವ ನಿರ್ಧಾರ ಮಾಡಿದ ನಂತರ ಸಾರ್ವಜನಿಕ ವಲಯದಲ್ಲಿ ಅವರು ‘ಅತಿಶಿ‘ ಎಂದೇ ಗುರುತಿಸಿಕೊಂಡಿದ್ದಾರೆ.