ಡೆಂಘೀ ಪರೀಕ್ಷೆಗೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಆಸ್ಪತ್ರೆ ಲೈಸೆನ್ಸ್ ರದ್ದು: ಡಿಸಿ

ಡೆಂಘೀ ಪರೀಕ್ಷೆಗೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಆಸ್ಪತ್ರೆ ಲೈಸೆನ್ಸ್ ರದ್ದು: ಡಿಸಿ

ಧಾರವಾಡ: ಡೆಂಘೀ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಎಲಿಸಾ ಹಾಗೂ ರ್‍ಯಾಪಿಡ್ ಟೆಸ್ಟ್‌ಗಳ ದರವನ್ನು, ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗ ಶಾಲೆಗಳು ಡಯಾಗೋಸ್ಟಿಕ್ ಲ್ಯಾಬರೋಟರಿಗಳು ಸರ್ಕಾರ ನಿಗದಿಪಡಿಸಿದ ದರವನ್ನೇ ಸಾರ್ವಜನಿಕರಿಂದ ಪಡೆಯಬೇಕು. ಈಗಾಗಲೇ ಸರ್ಕಾರ ದರ ನಿಗದಿಗೊಳಿಸಿ ಆದೇಶ ಹೊರಡಿಸಿದ್ದು, ಇದರ ಅನ್ವಯ ಹಣ ಪಡೆಯಬೇಕು. 

ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ ಬಗ್ಗೆ ದೂರು ಬಂದರೆ, ಪರಿಶೀಲಿಸಲಾಗುತ್ತದೆ. ಖಚಿತವಾದರೆ ಅಂತಹ ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಡೆಂಘೀ ಪರೀಕ್ಷೆಯ ದರಗಳ ಮಾಹಿತಿಯನ್ನು ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಚುರಪಡಿಸಬೇಕು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಡೆಂಘೀ ಜ್ವರ ಪತ್ತೆ ಹಚ್ಚುವ ELISA ಹಾಗೂ Rapid card test ದರಗಳನ್ನು (Screening test) ಪರಿಷ್ಕರಿಸಿ, ಸರ್ಕಾರ ಆದೇಶ ಹೊರಡಿಸಿದೆ. 

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್ ಲ್ಯಾಬ್‍ಗಳಿಗೆ ಡೆಂಘೀ ಜ್ವರ ಪತ್ತೆ ಹಚ್ಚುವ ಡೆಂಘೀ ಎಲಿಸಾಎನ್‍ಎಸ್ 1ಗೆ 300 ರೂಪಾಯಿ ಮತ್ತು ಡೆಂಘೀ ಏಲಿಸಾ ಐಜಿಎಂಗೆ 300 ರೂಪಾಯಿ ರ್‍ಯಾಪಿಡ್ ಕಾರ್ಡ್ ಟೆಸ್ಟ್ (ಎನ್‍ಎಸ್1, ಐಎಂಜಿ ಹಾಗೂ ಐಜಿಜಿ)ಗೆ 250 ರೂಪಾಯಿ ದರಗಳನ್ನು ಸರ್ಕಾರದಿಂದ ನಿಗದಿ ಮಾಡಲಾಗಿದೆ. ಸರ್ಕಾರದ ಈ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ ನಿರಂತರವಾಗಿ ಭೇಟಿ ನೀಡಿ, ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.