ಸಿಇಟಿ/ನೀಟ್ : 2ನೇ ಸುತ್ತಿ‌ನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

ಸಿಇಟಿ/ನೀಟ್ : 2ನೇ ಸುತ್ತಿ‌ನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶದ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. 

ಈ ಸುತ್ತಿನ ಸೀಟು ಹಂಚಿಕೆಗೆ ಸೆಪ್ಟೆಂಬರ್‌ 13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಷನ್‌ಗಳನ್ನು ಪರಿಗಣಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ ಎಂದು ಅವರು ವಿವರಿಸಿದ್ದಾರೆ. 

ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳು ಇದ್ದಲ್ಲಿ ಸೆಪ್ಟೆಂಬರ್‌ 19ರ ಬೆಳಿಗ್ಗೆ 10ಗಂಟೆಯೊಳಗೆ keauthority-ka@nic.in ಗೆ ಇ-ಮೇಲ್ ಮಾಡಬಹುದು. ಆಕ್ಷೇಪಣೆ ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು. 

ಸೀಟು ಹಂಚಿಕೆ ಕುರಿತು ಪ್ರಕಟಿಸಲಾಗುವ ಸೂಚನೆಗಳು, ಅಧಿಸೂಚನೆಗಳು ಮತ್ತು ಪ್ರಕಟಣೆಗಳನ್ನು ನೋಡದೆ ಇರುವ ಕಾರಣದಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಪ್ರಾಧಿಕಾರ ಜವಾಬ್ದಾರಿಯಾಗುವುದಿಲ್ಲ. ಅಭ್ಯರ್ಥಿಗಳು ಪ್ರತಿದಿನ ಕನಿಷ್ಠ ಎರಡು ಬಾರಿ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂದು ವಿವರಿಸಿದರು.