ರಾಣೆಬೆನ್ನೂರಿನಲ್ಲಿ ಅಮಿತ್ ಶಾ ರೋಡ್ ಶೋ, ಭಾರೀ ಜನಸ್ತೋಮ ಕಂಡು ಪುಳಕಿತಗೊಂಡ ಕೇಂದ್ರ ಸಚಿವ!

ಹಾವೇರಿ : ಲೋಕಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದ ಎರಡನೇ ಹಂತದ ಹದಿನಾಲ್ಕು ಕ್ಷೇತ್ರಗಳ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿ ವರಿಷ್ಠರು ಕರ್ನಾಟಕಕ್ಕೆ ಮೇಲಿಂದ ಮೇಲೆ ಆಗಮಿಸುತ್ತಿದ್ದು, ಬಿಜೆಪಿ ಮತ ಗಟ್ಟಿಗೊಳಿಸಿಕೊಳ್ಳುವತ್ತ ಚಿತ್ತ ಹರಿಸಿದಂತಿದೆ.
ಅದರ ಮುಂದುವರಿದ ಭಾಗವೆಂಬಂತೆ ಇಂದು ಹಾವೇರಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹಾವೇರಿಯ ರಾಣೆಬೆನ್ನೂರಿನಲ್ಲಿ ಬೃಹತ್ ರೋಡ್ ಷೋ ನಡೆಸಿದರು. ಈ ಮೂಲಕ ಬಿಜೆಪಿಗೆ ಮತ ಚಲಾಯಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಿದ್ದ ಬಿಜೆಪಿ ಕಾರ್ಯಕರ್ತರನ್ನು ಕಂಡು ಅಮಿತ್ ಶಾ ಅವರು ಪುಳಕಿತರಾದಂತೆ ಕಂಡು ಬಂತು. ಈ ವೇಳೆ ತೆರೆದ ವಾಹನವನ್ನೇರಿ ಅಪಾರ ಸಂಖ್ಯೆಯ ಜನಸ್ತೋಮದತ್ತ ಕೈ ಬೀಸುತ್ತಿದ್ದ ಶಾ , ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಪುನ: ಮನವಿ ಮಾಡಿಕೊಂಡರು. ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ಶಾಗೆ ಸಾಥ್ ನೀಡಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಅಮಿತ್ ಶಾ ಅವರು ಪಕ್ಷದ ಹಿರಿಯ ಪ್ರಮುಖ ಮುಖಂಡರೊಂದಿಗೆ ಕೆಲ ಹೊತ್ತು ಸಭೆ ನಡೆಸಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರೆಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.