ನಟಿ ಮನೆಯಲ್ಲೇ ಗಾಂಜಾ ಪತ್ತೆ ಬಳಿಕ ರಾಗಿಣಿ ಅರೆಸ್ಟ್

ಬೆಂಗಳೂರು: ನಟಿ ರಾಗಿಣಿ ಅವರ ಮನೆಯಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಂತರ ಬಂಧಿಸಿದ್ದಾರೆ.
ಇವತ್ತು ಬೆಳಗ್ಗೆ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಸಿಗರೇಟ್ ನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.
ಇದಾದ ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಿದ್ದಾರೆ.
ಇನ್ನೂ ನಟಿ ಮನೆಯ ಮೇಲೆ ಏಕಾಏಕಿ ದಾಳಿ ಮಾಡಿದ ವೇಳೆ ಅಧಿಕಾರಿಗಳು ಸರ್ಚ್ ವಾರೆಂಟ್ ತೋರಿಸಿ ಮನೆಯಲ್ಲಿರುವವರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನು ಒಂದು ಕಡೆ ಕೂರಿಸಿ ರಾಗಿಣಿ ಮನೆಯಲ್ಲಿ ಶೋಧ ಕಾರ್ಯ ಮಾಡತೊಡಗಿದರು.
ಈ ವೇಳೆ ಸಿಗರೇಟ್ ನಲ್ಲಿ ತುಂಬಿಟ್ಟಿದ್ದ ಡ್ರಗ್ಸ್, ನಾಲ್ಕು ಮೊಬೈಲ್, ಎರಡು ಲ್ಯಾಪ್ಟಾಪ್, ಮದ್ಯದ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಮೊಬೈಲ್ ಗಳಲ್ಲಿ ವಾಟ್ಸಪ್ ನೋಡುವಾಗ ಚಾಟ್ ಡಿಲೀಟ್ ಮಾಡಿರುವುದು ಗೊತ್ತಾಗಿದೆ. ಡಿಲೀಟ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳಿಂದ ಸಂದೇಶ ಹೆಚ್ಚಾದ ಕಾರಣ, ಎಲ್ಲಾ ಡಿಲೀಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಶೋಧ ಕಾರ್ಯದ ವೇಳೆ 8 ಗಾಂಜಾ ತುಂಬಿದ ಸಿಗರೇಟ್ ಪತ್ತೆಯಾಗಿದೆ. ಆದರೆ ಇದರಲ್ಲಿ ಬೇರೆ ಮಾದರಿಯ ಡ್ರಗ್ಸ್ ಮಿಶ್ರಣವಾದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ.
ಹೀಗಾಗಿ ಇದರ ಒಳಗಡೆ ನಿಜವಾಗಿ ಇರುವುದು ಏನು ಎಂಬುದನ್ನು ತಿಳಿಯಲು ಸಿಗರೇಟ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.