ಶಾಲೆಗಳಲ್ಲಿ ಅಡ್ಮಿಶನ್‍ಗೆ ಸರ್ಕಾರ ಗ್ರೀನ್‍ಸಿಗ್ನಲ್: ಸೆ.30ರೊಳಗೆ ಪೂರ್ಣಗೊಳಿಸಲು ಸೂಚನೆ..!

ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಶನ್ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ದಿನಾಂಕ 12,03,2020 ರಿಂದ ಶಾಲೆಗಳಿಗೆ ರಜೆಯನ್ನು ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಸುಮಾರು 5 ತಿಂಗಳುಗಳಿಗೂ ಹೆಚ್ಚಿನ ಕಾಲ ಶೈಕ್ಷಣಿಕ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಅಲ್ಲದೇ ಕೋರೊನಾ ಹಿನ್ನೆಲೆಯಲ್ಲಿ ಭೌತಿಕ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಮುಂದುವರೆದಿರುವುದರಿಂದ ಮಕ್ಕಳನ್ನು ಪರ್ಯಾಯವಾಗಿ ಸಂಪರ್ಕಿಸಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿದೇ ಇದ್ದಲ್ಲಿ, ಅವರು ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ.
ಮುಂದುವರೆದು ಹಲವು ಮಕ್ಕಳು ಶಾಲೆಯು ಪ್ರಾರಂಭವಾದ ನಂತರವೂ ಸಹ ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹದಂತೆ ಪಿಡುಗುಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಆದ್ದರಿಂದ ಶಾಲೆಗಳು ಭೌತಿಕವಾಗಿ ಪ್ರಾರಂಭವಾಗುವವರೆಗೂ ಮಕ್ಕಳನ್ನು ಯುಕ್ತ ಪರ್ಯಾಯ ಮಾರ್ಗಗಳ ಮೂಲಕ ಸಂಪರ್ಕಿಸಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸುಉವ ಹಾಗೂ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅವಶ್ಯಕವಾಗಿದೆ.
ಅನ್‍ಲಾಕ್ 4.0 ಗೈಡ್‍ಲೈನ್ಸ್‍ನಲ್ಲಿ ಸೆ.30ರವರೆಗೂ ಶಾಲೆಗಳನ್ನು ಆರಂಭಿಸಲು ಅನುಮತಿ ಕೊಟ್ಟಿಲ್ಲ. ಆದರೂ, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಸೆ.30ರೊಳಗೆ ಎಲ್ಲಾ ಪ್ರವೇಶಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚಿಸಿರುವ ಶಿಕ್ಷಣ ಇಲಾಖೆ, ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯಬಾರದು. ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ.
ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಸಂಬಳ ಕೊಡಲು ಪರದಾಡುತ್ತಿದ್ದ ಖಾಸಗಿ ಶಾಲೆಗಳಿಗೆ ಈ ಆದೇಶ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದರೆ, ಕೊರೊನಾದಿಂದಾಗಿ ಕೆಲಸ ಕಳೆದುಕೊಂಡ, ವ್ಯಾಪಾರ ಇಲ್ಲದೆ ಅಂಗಡಿಗಳನ್ನು ಮುಚ್ಚಿ ಬೀದಿ ಪಾಲಾಗಿರುವ ಪೋಷಕರು ಮಕ್ಕಳನ್ನು ಶಾಲೆಗೆ ಅಡ್ಮಿಷನ್ ಮಾಡಲು ಪರದಾಡುವ ಸ್ಥಿತಿ ಎದುರಾಗಿದೆ.