Breaking: ನಟ ವಿಜಯರಾಘವೇಂದ್ರ ಪತ್ನಿ ಹೃದಯಾಘಾತದಿಂದ ಸಾವು

Breaking: ನಟ ವಿಜಯರಾಘವೇಂದ್ರ ಪತ್ನಿ ಹೃದಯಾಘಾತದಿಂದ ಸಾವು

ಬೆಂಗಳೂರು: ಖ್ಯಾತ ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ವಿದೇಶ ಪ್ರವಾಸದಲ್ಲಿರುವಾಗಲೇ ತೀವ್ರ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಮಂಗಳೂರಿನಿಂದ ಬ್ಯಾಂಕಾಕ್ ಗೆ ನಟ ವಿಜಯರಾಘವೇಂದ್ರ ಪತ್ನಿ ಪ್ರವಾಸಕ್ಕೆಂದು ತೆರಳಿದ್ದರು. ಬ್ಯಾಂಕಾಕ್ ನಲ್ಲಿರೋವಾಗ ತೀವ್ರ ಹೃದಯಾಘಾತಕ್ಕೊಳಗಾಗಿದ್ದಾರೆ. ಈ ವೇಳೆ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಸ್ಪಂದನಾ ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರ ಪತಿ ವಿಜಯರಾಘವೇಂದ್ರ ಅವರು ಬೆಂಗಳೂರಿನಲ್ಲೇ ಇದ್ದಾರೆ. 

2007ರಲ್ಲಿ ವಿಜಯರಾಘವೇಂದ್ರ ಕೈಹಿಡಿದಿದ್ದ ಸ್ಪಂದನಾ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರ ಪುತ್ರಿಯಾಗಿದ್ದು, "ಕಿಸ್ ಮತ್" ಚಿತ್ರದ ನಿರ್ಮಾಪಕಿಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 2016 ರಲ್ಲಿ ತೆರೆ ಕಂಡ ರವಿಚಂದ್ರನ್ ಅವರ " ಅಪೂರ್ವ" ಚಿತ್ರದಲ್ಲಿ ನಟನೆ ಮಾಡಿದ್ದ ಸ್ಪಂದನಾ ಅವರು ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೇ ತಿಂಗಳ 26 ಕ್ಕೆ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಆದರೆ, ವಿಧಿಯ ಅಟ್ಟಹಾಸಕ್ಕೆ ಸ್ಪಂದನಾ ಇಹಲೋಕ ತ್ಯಜಿಸುವಂತಾಗಿದೆ. 

ಇನ್ನು, ಸ್ಪಂದನಾ ಮೃತದೇಹ ಬ್ಯಾಂಕಾಕ್ ನಿಂದ ನಾಳೆ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿದು ಬಂದಿದೆ. ವಿಜಯರಾಘವೇಂದ್ರ ಅವರ ಪತ್ನಿ ವಿಧಿವಶರಾದ ಸುದ್ದಿ ಕೇಳಿ ಅವರ ಕುಟುಂಬದವರಿಗೆ ಬರಸಿಡಿಲೆರಗಿದಂತಾಗಿದ್ದು, ಮೊದಲಿಗೆ ಯಾರೂ ನಂಬದಾಗಿದ್ದರಂತೆ. ಅವರಿಗೆ ಲೋ ಬಿಪಿಯಾಗಿದೆ ಎಂದೇ ಭಾವಿಸಿದ್ದರಂತೆ ಕೊನೆಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿ ಎರಡೂ ಕುಟುಂಬಗಳು ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ. ಸ್ಪಂದನಾ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದವರಿಗೆ ಆಘಾತ ಉಂಟಾಗಿದ್ದು ಸ್ಯಾಂಡಲ್ ವುಡ್ ನ ಹಲವರು ಸ್ಪಂದಾನಾ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.