ಮನೆಪಾಠಕ್ಕೆ ಬ್ರೇಕ್ : ಇಂದಿನಿಂದ ಶಾಲೆ ಪಾಠ ಶುರು

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 1 ರಿಂದ 5ನೇ ತರಗತಿ ಶಾಲೆಗಳು ಆರಂಭವಾಗಿವೆ. ಕೊರೊನಾದಿಂದ ಬಂದ್ ಆಗಿದ್ದ ಶಾಲೆಗಳು ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಓಪನ್ ಆಗಿವೆ. ಇಂದಿನಿಂದ ಭೌತಿಕ ತರಗತಿಗಳು ಶುರುವಾಗಿದ್ದು ಇನ್ನೊಂದು ವಾರ ನ.2ರವರೆಗೆ ಅರ್ಧ ದಿನ ಕ್ಲಾಸ್ ನಡೆಯಲಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಇಲ್ಲ ಎಂಬುದಾಗಿ ಇಲಾಖೆ ತಿಳಿಸಿದೆ. ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಕ್ಲಾಸ್ ನಡೆಯಲಿದೆ. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಕ್ಲೀನಿಂಗ್ ಕಾರ್ಯ ನಡೆಯಲಿದೆ. ಪಾಸಿಟಿವಿಟಿ ದರ ಶೇ.1 ಕ್ಕಿಂತ ಕಡಿಮೆ ಇರುವಲ್ಲಿ ಮಾತ್ರ ಸ್ಕೂಲ್ ಓಪನ್ ಮಾಡಲಾಗಿದೆ.ಇನ್ನು ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಪೋಷಕರ ಒಪ್ಪಿಗೆ ಪತ್ರ ತರಬೇಕು ಜೊತೆಗೆ ಮಕ್ಕಳಲ್ಲಿ ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢೀಕರಿಸಬೇಕು. ಒಂದು ತರಗತಿಯಲ್ಲಿ 20 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನ.2ರಿಂದ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಕಡ್ಡಾಯ ಹಾಗೂ ಶಿಕ್ಷಕರು, ಸಿಬ್ಬಂದಿ 2 ಡೋಸ್ ಲಸಿಕೆ ಕಡ್ಡಾಯವಾಗಿದೆ. ಮಕ್ಕಳಲ್ಲಿ ಒಂದು ಮೀಟರ್ ಅಂತರ ಪಾಲನೆ ಕಡ್ಡಾಯ. ಸ್ಯಾನಿಟೈಸೇಷನ್ ಹಾಗೂ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡುವುದು ಕಡ್ಡಾಯವಾಗಿದೆ.