ಶ್ವೇತಭವನ ಗುಂಡಿನ ದಾಳಿ : ಬದಲಾವಣೆ ಬಯಸುವ ನಾಯಕರ ಜೀವಕ್ಕೆ ಸದಾ ಅಪಾಯ - ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಸಹನೆ ಹೆಚ್ಚುತ್ತಿರುವಂತೆ ತೋರುತ್ತಿದೆ. ಅವರ ಮೇಲಿನ ದಾಳಿ ಪ್ರಯತ್ನಗಳು ಈ ಅಸಹನೆಯ ದ್ಯೋತಕವಾಗಿ ಕಾಣುತ್ತಿವೆ. ಆದಾಗ್ಯೂ, ತಮ್ಮ ಮೇಲಿನ ದಾಳಿಗಳು ಹೆಚ್ಚಾದಷ್ಟೂ ಟ್ರಂಪ್ ಮತ್ತಷ್ಟು ಸದೃಢರಾಗುತ್ತಿದ್ದಾರೆ.
ಶನಿವಾರದಂದು ಶ್ವೇತಭವನದ ವರದಿಗಾರರ ಸಂಘದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ವಾರ್ಷಿಕ ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಅಮೆರಿಕ ಅಧ್ಯಕ್ಷರನ್ನೇ ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಈ ಘಟನೆಯಿಂದ ವಿಚಲಿತರಾಗದ ಡೊನಾಲ್ಡ್ ಟ್ರಂಪ್, ಇದನ್ನು "ಒಂದು ಸಹಜ ಸಂಜೆ" ಎಂದು ಬಣ್ಣಿಸಿದ್ದು, ಮತ್ತೊಂದು ಭೋಜನಕೂಟ ಏರ್ಪಡಿಸಲು ಸಜ್ಜಾಗಿದ್ದಾರೆ.
ಟ್ರಂಪ್‌ರ ಪ್ರತಿಕ್ರಿಯೆ ಮತ್ತು ದೃಢ ಸಂಕಲ್ಪ
ಗುಂಡಿನ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಬಯಸುವ ನಾಯಕರು ಯಾವಾಗಲೂ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡೇ ಓಡಾಡಬೇಕಾಗುತ್ತದೆ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇರಾನ್ ಯುದ್ಧದ ನಂಟು ಇಲ್ಲ: ಟ್ರಂಪ್
ಗುಂಡಿನ ದಾಳಿಗೂ, ಅಮೆರಿಕವು ಇರಾನ್‌ನಲ್ಲಿ ನಡೆಸುತ್ತಿರುವ ಯುದ್ಧಕ್ಕೂ ಸಂಬಂಧವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಬಂಧಿತ ಆರೋಪಿ ತೋಮಸ್ ಅಲೆನ್
ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ತೋಮಸ್ ಅಲೆನ್ ಕುರಿತು ಹೊಸ ಮಾಹಿತಿ ಬಯಲಾಗಿದೆ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವೀಧರನಾಗಿರುವ ಈತ, ಉನ್ನತ ಶಿಕ್ಷಣ ಪಡೆದ ವ್ಯಕ್ತಿ ಎಂಬುದು ತಿಳಿದುಬಂದಿದೆ.
ಪ್ರಧಾನಿ ಮೋದಿಯಿಂದ ದಾಳಿ ಖಂಡನೆ
ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ" ಎಂದು ಸೂಚ್ಯವಾಗಿ ಹೇಳಿರುವ ಅವರು, ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿ, "ಅಮೆರಿಕ ಅಧ್ಯಕ್ಷರೂ ಸೇರಿದಂತೆ ಸಮಾರಂಭದಲ್ಲಿ ಹಾಜರಿದ್ದ ಎಲ್ಲರೂ ಸುರಕ್ಷಿತವಾಗಿರುವುದು ನೆಮ್ಮದಿ ತಂದಿದೆ" ಎಂದು ತಿಳಿಸಿದ್ದಾರೆ.