ನೂತನ ಕುಸ್ತಿ ಫೆಡರೇಷನ್ ಅಮಾನತುಗೊಳಿಸಿದ ಕೇಂದ್ರ ಕ್ರೀಡಾ ಸಚಿವಾಲಯ

ನೂತನ ಕುಸ್ತಿ ಫೆಡರೇಷನ್ ಅಮಾನತುಗೊಳಿಸಿದ ಕೇಂದ್ರ ಕ್ರೀಡಾ ಸಚಿವಾಲಯ

ನವದೆಹಲಿ: ಸಂಜಯ್ ಸಿಂಗ್ ನೇತೃತ್ವದ ಭಾರತ ಕುಸ್ತಿ ಫೆಡರೇಷನ್ (WFI) ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಗುರುವಾರ ನಡೆದ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಬಿಜೆಪಿ ಸಂಸದ ಮತ್ತು ಮಾಜಿ WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ಸಿಂಗ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಭಾರತದ ಖ್ಯಾತ ಕುಸ್ತಿಪಟುಗಳಾದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ತಮ್ಮ ಅಸಮಾಧಾನವನ್ನು ಹೊರಹಾಕಿ ನಿವೃತ್ತಿ ಘೋಷಿಸಿದ್ದರು. ಇದೀಗ ನೂತನ ಸಮಿತಿಯು ಒಕ್ಕೂಟದ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಕ್ರೀಡಾ ಸಚಿವಾಲಯ ಅಮಾನತು ಪ್ರಕಟಣೆ ಹೊರಡಿಸಿದೆ. 

ಇನ್ನು ನೂತನ ಅಧ್ಯಕ್ಷ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಅಂಡರ್-15 ಮತ್ತು ಅಂಡರ್-20 ರಾಷ್ಟ್ರೀಯ ಪಂದ್ಯಗಳನ್ನು ಇದೇ ತಿಂಗಳ ಅಂತ್ಯಕ್ಕೆ ಆತುರ ಆತುರವಾಗಿ ಆಯೋಜಿಸಲು ಮುಂದಾಗಿದ್ದರು. ನಿಯಮಾವಳಿಗಳ ಪ್ರಕಾರ ಕುಸ್ತಿಪಟುಗಳಿಗೆ 15 ದಿನಗಳ ಮುಂಚಿತವಾಗಿ ಮಾಹಿತಿ ಹಾಗೂ ಸೂಚನೆಗಳನ್ನು ನೀಡಬೇಕು. ಕುಸ್ತಿಪಟುಗಳಿಗೆ ಸರಿಯಾದ ಮಾಹಿತಿ ಮತ್ತು ಸೂಚನೆಗಳನ್ನು ನೀಡಿಲ್ಲ ಅನ್ನೋ ಆರೋಪದ ಮೇಲೆ ಕೇಂದ್ರ ಕ್ರೀಡಾ ಸಚಿವಾಲಯ WFI ಸಂಸ್ಥೆಯನ್ನು ಅಮಾನತುಗೊಳಿಸಿದೆ. 

ಸಂಜಯ್‌ ಸಿಂಗ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯಾದ ಸಾಕ್ಷಿ ಮಲಿಕ್ ಕಣ್ಣೀರಿಟ್ಟು ಕುಸ್ತಿಗೆ ವಿದಾಯ ಹೇಳಿದ್ದರು. ಇದಾದ ಬೆನ್ನಲ್ಲೇ ಬಜರಂಗ್‌ ಪುನಿಯಾ ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ‘ಪದ್ಮಶ್ರೀ ಪ್ರಶಸ್ತಿ’ ವಿಜೇತ ವೀರೇಂದ್ರ ಸಿಂಗ್ ಕೂಡ ಸಾಕ್ಷಿ ಮಲ್ಲಿಕ್ ಅವರಿಗೆ ಬೆಂಬಲ ನೀಡಿದ್ದರು. ಕುಸ್ತಿಪಟುಗಳ ಈ ಹೋರಾಟ ಹಾಗೂ ಕಣ್ಣೀರಿನ ವಿದಾಯ ದೇಶಾದ್ಯಂತ ಭಾರೀ ಚರ್ಚೆಗೆ ಗುರಿಯಾಗಿದೆ. ಈ ಬೆಳವಣಿಗೆಯ ಮಧ್ಯೆ ಕೇಂದ್ರ ಕ್ರೀಡಾ ಸಚಿವಾಲಯ ಭಾರತದ ಕುಸ್ತಿ ಫೆಡರೇಷನ್ ಅನ್ನೇ ಅಮಾನತುಗೊಳಿಸಿದೆ.