ಶೀಘ್ರದಲ್ಲೇ ಧಾರವಾಡ-ಹುಬ್ಬಳ್ಳಿ ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ

ವಿಶ್ವದ ಅತಿದೊಡ್ಡ ರೈಲ್ವೇ ಪ್ಲಾಟ್‌ಫಾರಂ, ಪರಿಸರ ಸ್ನೇಹಿ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿಯ ಸಿದ್ಧಾರೂಢ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ಶೀಘ್ರದಲ್ಲಿಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭವಾಗಲಿದೆ. ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ - ಬೆಂಗಳೂರು ನಡುವೆ 2023ರ ಮಾರ್ಚ್‌ನಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದ್ದು, ನೈರುತ್ಯ ರೈಲ್ವೇ ವಲಯದಿಂದ ಕೆಲಸ ಭರದಿಂದ ಸಾಗಿದೆ.
ಈಗಾಗಲೇ ಚೆನ್ನೈ - ಬೆಂಗಳೂರು - ಮೈಸೂರು ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಿದೆ. ಈಗ ಹುಬ್ಬಳ್ಳಿ - ಬೆಂಗಳೂರು ನಡುವೆ ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೇ ಸಿದ್ಧವಾಗಿದೆ. ಹುಬ್ಬಳ್ಳಿ - ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿದ್ದು, ಧಾರವಾಡದಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುವುದೆಂದರೆ ವಿಮಾನದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ವೇಗ, ಸುರಕ್ಷತೆ ಮತ್ತು ಅತ್ಯಾಧುನಿಕ ಸೇವೆ ಈ ರೈಲಿನಲ್ಲಿ ದೊರೆಯಲಿವೆ. ಪ್ರತಿ ಸೀಟಿಗೆ ಮೊಬೈಲ್ ಚಾರ್ಜರ್, ತಿಂಡಿ ಸವಿಯಲು ಟೇಬಲ್ ಇರಲಿವೆ. ಎಲ್ಲ ಬೋಗಿಗಳಿಗೆ ಆಟೋಮೆಟಿಕ್ ಬಾಗಿಲು, ಪ್ರಯಾಣಿಕರಿಗೆ ಆಡಿಯೋ ಮೂಲಕ ಮಾಹಿತಿ ನೀಡುವ ಸೌಲಭ್ಯ, ಮನರಂಜನೆಗಾಗಿ ವೈಫೈ ಸೌಲಭ್ಯ, ಸುಖಕರ ಆಸನಗಳು, ಬಯೋವ್ಯಾಕ್ಯೂಮ್ ಹೊಂದಿದ ಶೌಚಗೃಹ ಈ ಎಕ್ಸ್‌ಪ್ರೆಸ್ ರೈಲಿನಲ್ಲಿ ಇರಲಿವೆ.
ಪ್ರತಿ ಬೋಗಿಯಲ್ಲಿ ಪ್ರಯಾಣಿಕರು ಇರುವ ಸ್ಥಳದಲ್ಲಿಯೇ ತಿಂಡಿ, ಊಟ ಪೂರೈಸಲಾಗುತ್ತದೆ. 16 ಎಸಿ ಬೋಗಿಗಳಲ್ಲಿ 2 ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳು ಇರಲಿವೆ. 1,128 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದು. ಅಂಗವಿಕಲ ಪ್ರಯಾಣಿಕರಿಗೂ ಸಾಕಷ್ಟು ಸೌಲಭ್ಯಗಳು ಇವೆ. ರೈಲು ಕಡಿಮೆ ನಿಲುಗಡೆಗಳನ್ನು ಹೊಂದಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಆಗಲಿದೆ.