ಚನ್ನಪಟ್ಟಣ ಬೈ ಎಲೆಕ್ಷನ್ : HDK ಜೊತೆ ಬಿಜೆಪಿ ನಾಯಕರಿಂದ ನಿಖಿಲ್ ಪರ ಮತಯಾಚನೆ

ಚನ್ನಪಟ್ಟಣ: ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಅಬ್ಬರದ ಪ್ರಚಾರ ಶುರುವಾಗಿದೆ. ಬಿಜೆಪಿ ನಾಯಕರೊಂದಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಳ್ಳಿಹಳ್ಳಿಗೂ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ಕ್ಷೇತ್ರದ ಕೂಡ್ಲೂರು, ಮಳೂರು ಪಟ್ಟಣ ಹಾಗೂ ಚೆಕ್ಕರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದ್ದಾರೆ.
ಕುಮಾರಸ್ವಾಮಿಯೊಂದಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮೊದಲು ಹೊಟ್ಟಿನ ಹೊಸಹಳ್ಳಿಯಿಂದ ಪ್ರಚಾರ ಅರಭಿಸಿದ ಸಚಿವರನ್ನು ಚೆಕ್ಕರೆ ಗ್ರಾಮದಲ್ಲಿ ಸೇರಿಕೊಂಡ ಬಿಜೆಪಿ ನಾಯಕರು ಬಿರುಸಿನ ಪ್ರಚಾರಕ್ಕೆ ಸಾಥ್ ನೀಡಿದರು.ಪ್ರಚಾರ ವಾಹನದ ಮೇಲೆ ಭಾಷಣ ಮಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ಕಮಲದ ಹೂಗಳ ಗುಚ್ಛ ನೀಡಿದ ಅಶೋಕ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಭಿನಂದಿಸಿದರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಾಯಕರಿಗೆ ಬೃಹತ್ ಹೂವಿನ ಹಾರ ಹಾಕಿ ಬರಮಾಡಿಕೊಂಡು ಸ್ವಾಗತಿಸಿದರು.
ಬಳಿಕ ಚೆಕ್ಕೆರೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ ನಾಯಕರು, ಮನೆಮನೆಗೂ ತೆರಳಿ ಮತ ಯಾಚನೆ ನಡೆಸಿದರು. ಕ್ಷೇತ್ರದ ಮಿಣಕೆರೆ ದೊಡ್ಡಿ, ಗಂಗೇದೊಡ್ಡಿ, ಗೋವಿಂದಹಳ್ಳಿ, ಕೂರಣಗೆರೆ, ಕುಕ್ಕೂರು ದೊಡ್ಡಿ, ಕುಕ್ಕೂರು, ತೂಬಿನಕೆರೆ, ಮಳೂರುಪಟ್ಟಣ, ಮಾಳಗಾಳು, ಎಸ್ ಎಂ ಹಳ್ಳಿ, ಎಸ್ ಎಂ ದೊಡ್ಡಿ, ಕೂಡ್ಲೂರು, ಶ್ರೀರಾಂಪುರ ಮತ್ತು ವಾಲೇತೋಪು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.