ಧಾರವಾಡ ಜಿಲ್ಲೆಯಲ್ಲಿ ಪಿಓಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ ಜಿಲ್ಲಾಧಿಕಾರಿ

ಧಾರವಾಡ ಜಿಲ್ಲೆಯಲ್ಲಿ ಪಿಓಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ ಜಿಲ್ಲಾಧಿಕಾರಿ

ಧಾರವಾಡ: ಧಾರವಾಡ ಜಿಲ್ಲೆಯ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಿದೆ. ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. 

 

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಅವಳಿ ನಗರ ಹಾಗೂ ಜಿಲ್ಲೆಯಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುವ ತಯಾರಕರ, ಮಾರಾಟಗಾರರ, ಪರಿಸರವಾದಿಗಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು. 

 

ಗಣೇಶ ಚತುರ್ಥಿಯಂದು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಸ್ಥಾಪನೆಗೆ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗದರ್ಶಿಸೂತ್ರಗಳನ್ನು ನೀಡಿದೆ. ಪಿಓಪಿ ಗಣಪತಿ ಮೂರ್ತಿಗಳ ಸ್ಥಾಪನೆಗೆ ಸರ್ಕಾರ 2016 ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದೇಶ ಉಲ್ಲಂಘಿಸಿ ಪಿಓಪಿ ಗಣಪತಿ ಸ್ಥಾಪಿಸಿದರೆ ಮತ್ತು ಜಲಮೂಲಗಳಲ್ಲಿ ವಿಸರ್ಜಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ 10 ಸಾವಿರ ದಂಡ ಮತ್ತು ಜೈಲುವಾಸ ವಿಧಿಸಬಹುದಾಗಿದೆ. 

 

ಅವಳಿ ನಗರ ಹಾಗೂ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಓಪಿ ಗಣೇಶ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಹಾಯವಾಣಿ ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬಹುದು. ಅಧಿಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಮತ್ತು ದಾಸ್ತಾನು ಹೊಂದಿರುವ ಪಿಓಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ಹಬ್ಬ ಆಚರಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು.