ತುಮಕೂರು : ಸೌರಶಕ್ತಿ ಮೂಲಕ ಹಗಲಿನಲ್ಲಿ ರೈತರಿಗೆ ವಿದ್ಯುತ್ ಪೂರೈಕೆ - ಸಚಿವ ಕೆ.ಜೆ. ಜಾರ್ಜ್

ತುಮಕೂರು : ರಾಜ್ಯದಲ್ಲಿ ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸುವ ಸಲುವಾಗಿ ಸೌರಶಕ್ತಿ ಮೂಲಕ ಹಗಲಿನಲ್ಲಿ ರೈತರಿಗೆ ವಿದ್ಯುತ್ ಪೂರೈಕೆ ಮಾಡಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಜಿಲ್ಲೆಯ ಶಿರಾ ತಾಲ್ಲೂಕು ಚಂಗಾವರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಪಿಎಂ ಕುಸುಮ್ ಘಟಕ ಸಿ ಯೋಜನೆಯಡಿ ನಿರ್ಮಿಸುತ್ತಿರುವ ೨.೪ ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅಳವಡಿಕೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ ತಡೆರಹಿತ ಸುಸ್ಥಿರ ವಿದ್ಯುತ್ ಸರಬರಾಜು ಮಾಡಲು ಈ ಸೋಲಾರ್ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಶಿರಾ ತಾಲ್ಲೂಕಿನ ಚಂಗಾವರದಲ್ಲಿ ನಿರ್ಮಿಸಿರುವ ಸೋಲಾರ್ ಪ್ಲಾಂಟ್‌ನಿಂದ ೯೪೪ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಸಾಧ್ಯವಾಗಲಿದೆ. ಈ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕಾಗಿ ೧೧ ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಚಂಗಾವರದಲ್ಲಷ್ಟೇ ಅಲ್ಲದೆ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯಲ್ಲಿಯೂ ೨೫ ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ೬.೫ ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅನ್ನು ನಿರ್ಮಿಸಲಾಗಿದೆ. ಇದರಿಂದ ೧೩೫೫ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಹೊಂದಲಾಗಿದೆ. ಮೆ|| ರಾಮ್ ತರಂಗ್ ಸೆಲ್ಯೂಷನ್ಸ್ ಪ್ರವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ಸೋಲಾರ್ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಕುಸುಮ್ ಸಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಸುಮ್ ಸಿ ಯೋಜನೆಯಡಿ ನಿರ್ಮಿಸಿರುವ ಸೌರ ಸ್ಥಾವರಗಳು ಕೃಷಿ ವಿದ್ಯುತ್ ಸರಬರಾಜಿನಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲಿದೆ. ಈ ಸೌರ ಸ್ಥಾವರಗಳು ಸಾಂಪ್ರದಾಯಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಗ್ರಾಮೀಣ ರೈತರನ್ನು ಸಬಲಗೊಳಿಸಲಿದೆ ಎಂದು ಹೇಳಿದರು.
ಶಿರಾ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಾದ್ಯಂತ ಸರ್ಕಾರವು ಕುಸುಮ್-ಸಿ ಯೋಜನೆಯ ಕಾರ್ಯಾರಂಭ ಮಾಡಿದ್ದು, ಪ್ರಾರಂಭಿಕವಾಗಿ ಶಿರಾ ತಾಲ್ಲೂಕಿನ ಚಂಗಾವರ ಹಾಗೂ ಚಿಕ್ಕಬಾಣಗೆರೆ ಗ್ರಾಮಗಳಲ್ಲಿ ಸೌರ ಘಟಕಗಳನ್ನು ನಿರ್ಮಿಸಲಾಗಿದೆ. ಇದರಿಂದ ಸ್ಥಳೀಯ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ತಡೆ ರಹಿತ ವಿದ್ಯುತ್ ಪೂರೈಕೆ ಮಾಡಲಾಗುವುದು. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಸೌರ ಘಟಕಗಳ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದರಲ್ಲದೆ, ಕುಸುಮ್-ಸಿ ಯೋಜನೆಯಿಂದ ಬೆಸ್ಕಾಂ ಕಂಪನಿಗೆ ವಿದ್ಯುತ್ ಖರೀದಿ ದರ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ, ಬೆಸ್ಕಾಂ ಮುಖ್ಯ ಇಂಜಿನಿಯರ್(ಯೋಜನೆಗಳು) ರಮೇಶ್ ಗುಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.