ಐಸಿಸಿ ವರ್ಷದ ODI ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಸ್ಮೃತಿ ಮಂಧಾನ ಸೇರಿ ನಾಲ್ವರ ನಾಮನಿರ್ದೇಶನ

ಐಸಿಸಿ ವರ್ಷದ ODI ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಸ್ಮೃತಿ ಮಂಧಾನ ಸೇರಿ ನಾಲ್ವರ ನಾಮನಿರ್ದೇಶನ

ದುಬೈ: ICC ಮಹಿಳಾ ODI ವರ್ಷದ ಕ್ರಿಕೆಟರ್ 2024ಕ್ಕೆ ನಾಮನಿರ್ದೇಶನಗೊಂಡ ಆಟಗಾರರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟಿಸಿದೆ. ಇದರಲ್ಲಿ ಭಾರತದ ಸ್ಮೃತಿ ಮಾತ್ರ ಸ್ಥಾನ ಪಡೆದಿದ್ದಾರೆ. 

ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ರನ್ ಮಳೆಯನ್ನೇ ಹರಿಸುವ ಮೂಲಕ 2024 ಅನ್ನು ಅದ್ದೂರಿಯಾಗಿ ಕೊನೆಗೊಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಏಕದಿನ ಮತ್ತು ಟಿ20 ಸರಣಿಯಲ್ಲಿ ಮಂಧಾನ ಸತತ 5 ಅರ್ಧಶತಕಗಳನ್ನು ಸಿಡಿಸಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧವೂ ಶತಕ ಗಳಿಸಿದ್ದರು. ಮಂಧಾನ ಈ ವರ್ಷ ಆಡಿರುವ 12 ಏಕದಿನ ಇನ್ನಿಂಗ್ಸ್‌ಗಳಲ್ಲಿ 747 ರನ್ ಗಳಿಸಿದ್ದಾರೆ. ಇದು ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯಾಗಿದೆ. 

ಭಾರತದ ಸ್ಮೃತಿ ಮಂಧಾನ, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್, ಆಸ್ಟ್ರೇಲಿಯಾದ ಅನಾಬೆಲ್ ಸದರ್ಲ್ಯಾಂಡ್ (369 ರನ್, 13 ವಿಕೆಟ್) ಮತ್ತು ಶ್ರೀಲಂಕಾದ ಚಾಮರಿ ಅಟಪಟ್ಟು (458 ರನ್, 9 ವಿಕೆಟ್) ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿರುವ ನಾಲ್ವರು ಕ್ರಿಕೆಟರ್‌ಗಳಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಲಾರಾ ವೊಲ್ವಾರ್ಡ್ 2024 ರಲ್ಲಿ ODIಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರ ಈ ವರ್ಷ ODIಗಳಲ್ಲಿ 12 ಇನ್ನಿಂಗ್ಸ್‌ಗಳನ್ನು ಆಡಿದರು ಮತ್ತು 87.12 ಸರಾಸರಿ ಮತ್ತು 87.34 ಸ್ಟ್ರೈಕ್ ರೇಟ್‌ನಲ್ಲಿ 697 ರನ್ ಗಳಿಸಿದ್ದಾರೆ.