ಭಾರತ-ಬ್ರಿಟನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಯುದ್ಧದ ಸುದ್ದಿಗಳ ಮಧ್ಯೆ ಸದ್ದಿಲ್ಲದೆ ಭಾರತವು ಬ್ರಿಟನ್ ಜೊತೆಗೆ ಮಂಗಳವಾರ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಂಡಿದೆ. ಈ ಒಪ್ಪಂದದ ಪರಿಣಾಮವಾಗಿ ಬ್ರಿಟನ್ನಿನ ಸ್ಕಾಚ್ ವಿಸ್ಕಿ ಮತ್ತು ಕಾರುಗಳು ಭಾರತದಲ್ಲಿ ಅಗ್ಗವಾಗಲಿವೆ. ಅಲ್ಲದೆ, ಬ್ರಿಟನ್‌ನಲ್ಲಿ ಮಾರಾಟ ಆಗುವ ಭಾರತದ ಜವಳಿ ಮತ್ತು ಚರ್ಮದ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಆಗಲಿದೆ.
ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಎಕ್ಸ್ ಪೋಸ್ಟ್ನಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ಈ ಒಪ್ಪಂದವನ್ನು ಅಂತಿಮಗೊಳಿಸಿದ್ದಾಗಿ ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಭಾರತವು ಬ್ರಿಟನ್ನಿನ ವಿಸ್ಕಿ ಮತ್ತು ಜಿನ್ ಮೇಲಿನ ಸುಂಕವನ್ನು ಈಗಿರುವ ಶೇ 150ರ ಬದಲು ಶೇ 75ಕ್ಕೆ ತಗ್ಗಿಸಲಿದೆ. ಒಪ್ಪಂದದ ಹತ್ತನೆಯ ವರ್ಷದಲ್ಲಿ ಈ ಸುಂಕದ ಪ್ರಮಾಣವು ಶೇ 40ಕ್ಕೆ ಇಳಿಕೆ ಆಗಲಿದೆ. ಮೋಟಾರು ವಾಹನ ಉತ್ಪನ್ನಗಳ ಮೇಲಿನ ಸುಂಕವು ಈಗಿನ ಶೇ 100ರಷ್ಟರ ಬದಲು ಶೇ 10ಕ್ಕೆ ಇಳಿಕೆ ಆಗಲಿದೆ. ಆದರೆ ಇದಕ್ಕೆ ಕೋಟಾ ಮಿತಿ ಇರಲಿದೆ.
ಭಾರತದ ಶೇಕಡ 99ರಷ್ಟು ಉತ್ಪನ್ನ ವರ್ಗಗಳ ಮೇಲಿನ ತೆರಿಗೆಯು ಇಲ್ಲವಾಗಲಿದೆ. ಇದರಿಂದಾಗಿ ಭಾರತಕ್ಕೆ ಪ್ರಯೋಜನ ಆಗಲಿದೆ. ಎಫ್‌ಟಿಎ ಕಾರಣದಿಂದಾಗಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೊತ್ತವು 2030ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.
ಸರ್ಕಾರದ ಮಟ್ಟದಲ್ಲಿನ ಅಂದಾಜಿನ ಪ್ರಕಾರ ಈ ಒಪ್ಪಂದದಿಂದಾಗಿ ಬ್ರಿಟನ್ನಿನ ಅರ್ಥ ವ್ಯವಸ್ಥೆಯ ಮೌಲ್ಯ 2040ರ ವೇಳೆಗೆ ವಾರ್ಷಿಕ 4.8 ಶತಕೋಟಿ ಜಿಬಿಪಿಯಷ್ಟು (ಗ್ರೇಟ್ ಬ್ರಿಟನ್ ಪೌಂಡ್) ಹೆಚ್ಚಲಿದೆ.