ಶಾಸಕ ಸ್ಥಾನ ಮರಳಿ ಪಡೆದ ಗಾಲಿ ಜನಾರ್ದನ ರೆಡ್ಡಿ

ಶಾಸಕ ಸ್ಥಾನ ಮರಳಿ ಪಡೆದ ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಓಬಳಾಪುರಂ ಮೈನಿಂಗ್ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಶಾಸಕ ಸ್ಥಾನವನ್ನು ಮತ್ತೆ ಮರುಸ್ಥಾಪಿಸಲಾಗಿದೆ. 

ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ತೆಲಂಗಾಣ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಈ ಹಿನ್ನಲೆಯಲ್ಲಿ ವಿಧಾನಸಭಾ ಕಾರ್ಯದರ್ಶಿ ಅವರ ಶಾಸಕರ ಸ್ಥಾನ ಮರುಸ್ಥಾಪನೆ ಮಾಡಿದ್ದಾರೆ. 

ಓಬಳಾಪುರಂ ಮೈನಿಂಗ್ ಕಂಪನಿ (OMC)ಯ ಅಕ್ರಮ ಗಣಿಗಾರಿಕೆ ಸಂಬಂಧದ ಪ್ರಕರಣದಲ್ಲಿ, ಸಿಬಿಐ ವಿಶೇಷ ಕೋರ್ಟ್ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಅವರು ಶಾಸಕರ ಸ್ಥಾನವನ್ನು ಕಳೆದುಕೊಂಡಿದ್ದರು. 

ಆದರೆ, ರೆಡ್ಡಿ ಅವರು ಈ ತೀರ್ಪು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ, ಹೈಕೋರ್ಟ್ ಸಿಬಿಐ ಕೋರ್ಟ್ ತೀರ್ಪಿಗೆ ತಡೆ ನೀಡಿದ್ದು, ಜೊತೆಗೆ ರೆಡ್ಡಿಗೆ ಜಾಮೀನು ನೀಡಿದೆ.