ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ ವಿಶೇಷ ಅಧಿವೇಶನ ಕರೆದ ಕೇಂದ್ರ ಸರ್ಕಾರ - ಕಾರಣ ಇನ್ನೂ ನಿಗೂಢ

ನವದೆಹಲಿ: ಕೇಂದ್ರ ಸರ್ಕಾರವು ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
17ನೇ ಲೋಕಸಭೆಯ 13ನೇ ಅಧಿವೇಶನ ಹಾಗೂ ರಾಜ್ಯಸಭೆಯ 261ನೇ ಅಧಿವೇಶನ ಇದಾಗಿರಲಿದೆ. ಅಮೃತ್ ಕಾಲದ ಈ ಮಹತ್ವದ ಕಾಲಫಟ್ಟದಲ್ಲಿ ಒಂದು ರಚನಾತ್ಮಕ ಅಧಿವೇಶವನ್ನು ಮುನ್ನೋಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆಯುವ ಜಿ-20 ಶೃಂಗಸಭೆ ಬಳಿಕ ಅಧಿವೇಶನ ಕರೆಯಲಾಗಿದ್ದು, ಯಾವ ಉದ್ದೇಶಕ್ಕೆ ಈ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಈವರೆಗೂ ಸರ್ಕಾರ ಮಾಹಿತಿ ನೀಡಿಲ್ಲ. ಹಳೆಯ ಕಟ್ಟಡದಿಂದ ಹೊಸ ಸಂಸತ್ ಭವನಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ವಿಶೇಷ ಅಧಿವೇಶನ ಕರೆಯಲಾಗುತ್ತಿದೆ ಎಂಬ ಊಹಾಪೋಹವಿದೆ. ಆದ್ದರಿಂದ, ಈ ಅಧಿವೇಶನವು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಿ ಹೊಸ ಕಟ್ಟಡದಲ್ಲಿ ಕೊನೆಗೊಳ್ಳಬಹುದು ಎನ್ನಲಾಗುತ್ತಿದೆ.