T20 WC | INDvsZIM: ಭಾರತಕ್ಕೆ 71 ರನ್‌ಗಳಿಂದ ಗೆಲುವು

ಮೆಲ್ಬೋರ್ನ್: ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ ಅರ್ಧಶತಕ ಹಾಗೂ ಬೌಲರ್‌ಗಳ ಉತ್ತಮ ಬೌಲಿಂಗ್ ಸಹಾಯದಿಂದ ಭಾರತ ತಂಡವು ಜಿಂಬಾಬ್ವೆಗೆ 71 ರನ್‌ಗಳಿಂದ ಗೆಲುವು ಸಾಧಿಸಿದೆ.
ಟಿ20 ವಿಶ್ವಕಪ್ ಭಾಗವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಇಂದಿನ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ 115 ರನ್ ಗಳಿಸಿ ಆಲೌಟ್‌ಗೆ ತುತ್ತಾಯಿತು.
ಭಾರತದ ಪರ ಆರ್.ಅಶ್ವಿನ್ 3 ವಿಕೆಟ್, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮುನ್ನ ಭಾರತದ ಪರ ಕೆ.ಎಲ್.ರಾಹುಲ್ 51 ರನ್ (35 ಎಸೆತ), ಸೂರ್ಯಕುಮಾರ್ ಯಾದವ್ 61 ರನ್ (25 ಎಸೆತ), ವಿರಾಟ್ ಕೊಹ್ಲಿ 26 ರನ್ ಹಾಗೂ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿದರು. ಇನ್ನು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ರಿಷಬ್ ಪಂತ್ ವಿಫಲರಾದರು. ಅವರು 5 ಎಸೆತಗಳಲ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.