ನಾಳೆಯಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ- ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ

ನಾಳೆಯಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ- ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಗಳು ನಾಳೆಯಿಂದ (ಮಾರ್ಚ್ 31) ಏಪ್ರಿಲ್ 15ರವರೆಗೆ ನಡೆಯಲಿವೆ. ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಬಹು ಆಯ್ಕೆ ಪ್ರಶ್ನೆಗಳನ್ನ ನೀಡಲಾಗುತ್ತಿದೆ. 

 

ನಾಳೆಯಿಂದ ಆರಂಭಗೊಳ್ಳುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಶಾಲಾ ವಿದ್ಯಾರ್ಥಿಗಳು 7,94,611 ಆಗಿದ್ದರೆ 20,750 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 18,272 ಖಾಸಗಿ ಅಭ್ಯರ್ಥಿಗಳಿದ್ದಾರೆ. 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. 

8,42,811 ನೋಂದಾಯಿತ ವಿದ್ಯಾರ್ಥಿಗಳಿಗಾಗಿ ರಾಜ್ಯಾದ್ಯಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರಿ ಶಾಲೆಗಳ 3,60,862, ಅನುದಾನಿತ ಶಾಲೆಗಳ 2,20,831 ಹಾಗೂ ಅನುದಾನ ರಹಿತ ಶಾಲೆಗಳ 2,61,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದೆ.