ಹುಬ್ಬಳ್ಳಿ: ರಂಗಪಂಚಮಿ ಹಿನ್ನೆಲೆ 18ರಂದು ನಿಷೇಧಾಜ್ಞೆ - ಕಮೀಷನರೇಟ್ ಆದೇಶ..!

ಹುಬ್ಬಳ್ಳಿ: ಹೋಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಮಾರ್ಚ್ 18ರಂದು ರಂಗಪಂಚಮಿ ಆಚರಿಸುತ್ತಿದ್ದು, ಅಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.
ಕಾಳಮ್ಮನ ಅಗಸಿಯಿಂದ ಡಾಕಪ್ಪ ವೃತ್ತದವರೆಗೆ, ಡಾಕಪ್ಪ ವೃತ್ತದಿಂದ ಕೌಲ್‌ಪೇಟೆ ಕ್ರಾಸ್‌ವರೆಗೆ, ಡಾಕಪ್ಪ ವೃತ್ತದಿಂದ ಹಳೇ ಕೆಇಬಿ ಕಚೇರಿವರೆಗಿನ ಪ್ರದೇಶವನ್ನು ಅತಿಸೂಕ್ಷ್ಮ ಸ್ಥಳವೆಂದು ಗುರುತಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಈ ಮಾರ್ಗದಲ್ಲಿ ಮೆರವಣಿಗೆ, ಬೈಕ್ ರ್‍ಯಾಲಿ, ವಾಹನಗಳಲ್ಲಿ ಧ್ವನಿವರ್ಧಕ ಬಳಸುವುದು, ಬ್ಯಾನರ್, ಬಂಟಿಂಗ್ಸ್ ಉಪಯೋಗಿಸುವುದು, ಸಭೆ, ಸಮಾರಂಭ ಹಾಗೂ ಐದಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದಕ್ಕೆ ನಿರ್ಬಂಧಿಸಲಾಗಿದೆ. ಪ್ರಚೋದನಕಾರಿ ಹಾಡು, ಕೂಗಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೇರೆ ಧರ್ಮಿಯರಿಗೆ ಅವರ ಅನುಮತಿಯಿಲ್ಲದೆ ಬಣ್ಣ ಹಚ್ಚಬಾರದು ಎಂದು ಕಮಿಷನರ್ ಆದೇಶದಲ್ಲಿ ಸೂಚಿಸಿದ್ದಾರೆ.