ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಐತಿಹಾಸಿಕ ಭಾಷಣ

ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಐತಿಹಾಸಿಕ ಭಾಷಣ

ವ್ಯಾಟಿಕನ್ ಸಿಟಿ: ರೋಮ್‌ನ ವ್ಯಾಟಿಕನ್ ನಗರದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ ನಡೆದಿರುವ "ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು" ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾದ ಮೂರು ದಿನಗಳ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತಮ್ಮ ಐತಿಹಾಸಿಕ ಭಾಷಣ ಮಾಡಿದರು. 

ತಾನು ಇಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಯಾಗಿ ಬಂದಿಲ್ಲ. ಬದಲಾಗಿ ಮಾನವೀಯತೆಯ ವಿನಮ್ರ ಧ್ವನಿಯಾಗಿ, ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯಿಂದ ತುಂಬಿದ ಒಂದು ಸುಂದರ ಪ್ರಪಂಚದ ಕನಸು ಕಾಣುವ ಶತಕೋಟಿ ಜನರ ಸಾಮೂಹಿಕ ಆಶಯ. ಹೋರಾಟ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಅವರೆಲ್ಲರ ಧ್ವನಿಯಾಗಿ ಇಲ್ಲಿ ನಿಮ್ಮೆದುರು ನಿಂತಿದ್ದೇನೆ. 

ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ತಾನು ಬಂದಿದ್ದೇನೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಅದರಂತೆ ನನಗೆ ಮತ್ತು ನನ್ನಂತಹ ಅಸಂಖ್ಯಾತರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದತೆಯಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ನೂರು ವರ್ಷಗಳ ಬಳಿಕ ಈ ಮೈಲಿಗಲ್ಲನ್ನು ಆಚರಿಸುವುದು ಕೇವಲ ಒಂದು ಸ್ಮರಣಾರ್ಥ. ಇದು ಸಮ್ಮೇಳನವಾಗಿ ಮಾತ್ರವಲ್ಲ-ಇದು ಹೊಸ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ನೀಡುವಂತಹ ಒಂದು ಶಕ್ತಿಯುತ ಕರೆಯಾಗಿದೆ. 

ಕಳೆದ ಶತಮಾನದಲ್ಲಿ ನಡೆದ ಗಮನಾರ್ಹವಾದ ಪ್ರಗತಿಗಳು, ವಿಶೇಷವಾಗಿ ತಂತ್ರಜ್ಞಾನದಲ್ಲಿ ನಡೆದ ಅನ್ವೇಷಣೆಗಳು ಮತ್ತು ಭಾಗತೀಕರಣದ ಪರಿಣಾಮವಾಗಿ, ನಾವು ಭೌತಿಕವಾಗಿ ಹತ್ತಿರವಾಗಿದ್ದೇವೆ. ಆದರೆ, ನಮ್ಮ ಹೃದಯಗಳು ಮತ್ತಷ್ಟು ದೂರ ಹೋಗಿವೆ ಅಸಮಾನತೆ, ಅಜ್ಞಾನ, ಅಸಹಿಷ್ಣುತೆ ಮತ್ತು ವೂರ್ವಾಗ್ರಹಗಳಿಂದ ಪ್ರೇರಿತವಾದ ಭಯ ಮತ್ತು ಅಪನಂಬಿಕೆಗಳು ನಮ್ಮ ಮನಸ್ಸುಗಳನ್ನು ಅವರಿಸಿಕೊಂಡಿವೆ. ಇದರ ಪರಿಣಾಮವಾಗಿ, ಮಾನವೀಯತೆಯ ಮೂಲಭೂತ ಮೌಲ್ಯಗಳು ಮನುಕಾಗಿವೆ. ಸಮಾಜದಲ್ಲಿ ಎಲ್ಲಾ ವರ್ಗಗಳ ಜನರ ಕೂಗು, ಸಂಘರ್ಷಗಳು ಮತ್ತು ಈ ಜಗತ್ತಿನ ಮೌನ ರೋಧನೆಗಳು ನಮ್ಮೆಲ್ಲರ ತುರ್ತು ಗಮನಕ್ಕೆ ಕಾದಿವೆ. ಸಮ್ಮೇಳನದ ಈ ಮಹತ್ವಪೂರ್ಣ ಕ್ಷಣಗಳು ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಪುನರ್ಮನನ ಮಾಡುವ ಕ್ಷಣಗಳು ಮಾತ್ರವಲ್ಲ, ಅದು ಧಾರ್ಮಿಕ ಧ್ರುವೀಕರಣ, ನಾಮಾಜಿಕ ಅನ್ಯಾಯ ಮತ್ತು ಅಂತರ್ಧರ್ಮಿಯ ಸಂವಾದದ ನಿರ್ಣಾಯಕ ಅಗತ್ಯವನ್ನು ಸ್ಪಷ್ಟವಾಗಿ ಎಲ್ಲರಿಗೆ ಸೂಚಿಸುವ ಸಮಯೋಚಿತ ಜ್ಞಾಪನೆಯಾಗಿವೆ ಎಂದು ಯು.ಟಿ.ಖಾದರ್ ಹೇಳಿದರು.