ಟೀಂ ಇಂಡಿಯಾ ಭವಿಷ್ಯದ ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಆಸ್ಪತ್ರೆಗೆ ದಾಖಲು

ಟೀಂ ಇಂಡಿಯಾ ಭವಿಷ್ಯದ ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಆಸ್ಪತ್ರೆಗೆ ದಾಖಲು

ರಾಂಚಿ: ಭಾರತದ ಕ್ರಿಕೆಟಿಗ, ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಹಠಾತ್ ಅನಾರೋಗ್ಯದಿಂದಾಗಿ ರಾಂಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿರುವ ಸರ್ಫರಾಜ್ ಖಾನ್ ಆಸ್ಪತ್ರೆಯಲ್ಲಿದ್ದ ಕಾರಣ ಭಾನುವಾರ ಸರ್ವಿಸಸ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ. 

ಕ್ರಿಕ್‌ಬಜ್ ವರದಿಯ ಪ್ರಕಾರ, 25 ವರ್ಷ ಹರೆಯದ ಬ್ಯಾಟರ್ ಸರ್ಫರಾಜ್ ಖಾನ್ ಶನಿವಾರ ರಾತ್ರಿಯಿಡಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರಿಂದ ಭಾನುವಾರ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮುಂಬೈ ತಂಡ ಸೋಲು ಕಂಡಿತು. 

ಸರ್ಫರಾಜ್ ಆರೋಗ್ಯದ ಬಗ್ಗೆ ತಂದೆ ನೌಶಾದ್ ಖಾನ್ ಮಾಹಿತಿ ನೀಡಿದ್ದು, ನನ್ನ ಮಗ ಕೆಲ ಸಮಯದಿಂದ ಕಿಡ್ನಿ ಸ್ಟೋನ್‌ನಿಂದ ಬಳಲುತ್ತಿದ್ದಾನೆ. ಈಗ ಜೋರಾಗಿ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಅವರು ಈಗ ಚೆನ್ನಾಗಿದ್ದಾರೆ ಎಂದು ನೌಶಾದ್ ಖಾನ್ ಹೇಳಿದ್ದಾರೆ. 

ಆಸ್ಪತ್ರೆಯಿಂದ ಬಿಡುಗಡೆ ಆದರೆ ನವೆಂಬರ್ 17 ರಂದು ನಡೆಯಲಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಇವರು ಆಡುವ ನಿರೀಕ್ಷೆಯಿದೆ.