ಧಾರವಾಡಕ್ಕೆ ಮೋಹನ್ ಭಾಗವತ್ ಭೇಟಿ - ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹೈ ಅಲರ್ಟ್

ಧಾರವಾಡಕ್ಕೆ ಮೋಹನ್ ಭಾಗವತ್ ಭೇಟಿ - ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹೈ ಅಲರ್ಟ್

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಂದುಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಯೋಧರು ಮತ್ತು ಪೊಲೀಸರ ನೇತೃತ್ವದಲ್ಲಿ ಕಟ್ಟುನಿಟ್ಟಾದ ಭದ್ರತೆ ಒಡ್ಡಲಾಗಿತ್ತು. 

ಮೋಹನ್ ಭಾಗವತ್ ಅವರು ಬೆಳಗಾವಿಯಿಂದ ರಸ್ತೆ ಮಾರ್ಗದ ಮೂಲಕ ಧಾರವಾಡಕ್ಕೆ ತೆರಳಲಿದ್ದಾರೆ. ಧಾರವಾಡದಲ್ಲಿ ಎರಡು ದಿನ ತಂಗಲಿದ್ದು, ರಾಷ್ಟ್ರೋತ್ಥಾನ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ. 

ಭಾರತ-ಪಾಕಿಸ್ತಾನ ನಡುವಿನ ವಾಯುದಾಳಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP), ಮತ್ತು ಡಾಗ್ ಸ್ಕ್ವಾಡ್‌ನಿಂದ ತೀವ್ರ ತಪಾಸಣೆ ನಡೆಯುತ್ತಿದೆ. ಪ್ರಯಾಣಿಕರ ಲಗೇಜ್‌ಗಳನ್ನು ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಮತ್ತು ಸ್ಕ್ಯಾನರ್‌ಗಳ ಮೂಲಕ ಪರಿಶೀಲಿಸಲಾಗುತ್ತಿದೆ. 

ರೈಲ್ವೆ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲಾಗಿದ್ದು, ರೈಲು ಬೋಗಿಗಳ ಒಳಗೆ ಇಂಚಿಂಚು ತಪಾಸಣೆ ನಡೆಯುತ್ತಿದೆ. ಸುಮಾರು 50 ಪೊಲೀಸರು ಮತ್ತು 10 ಚೆಕ್‌ಪೋಸ್ಟ್‌ಗಳ ಮೂಲಕ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.