ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಪಟ್ಟಿದ್ದೆ, ಆದರೆ ತಕ್ಕ ಪ್ರತಿಫಲ ಸಿಗಲಿಲ್ಲ; ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ : ಸಚಿನ್ ಪೈಲಟ್

ಜೈಪುರ:”ನಾನು ಬಿಜೆಪಿಗೆ ಸೇರುವುದಿಲ್ಲ, ರಾಜಸ್ಥಾನದಲ್ಲಿ ಕೆಲವು ನಾಯಕರು ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ, ಆದರೆ ನಾನು ಬಿಜೆಪಿ ಸೇರುವುದಿಲ್ಲ” ಎಂದು ಕಾಂಗ್ರೆಸ್ ನಿಂದ ಉಚ್ಛಾಟಿತಗೊಂಡಿರುವ ಸಚಿನ್ ಪೈಲಟ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ನಾನು ಸಾಕಷ್ಟು ಕಷ್ಟಪಟ್ಟಿದ್ದೆ. ಅದಕ್ಕೆ ತಕ್ಕ ಪ್ರತಿಫಲ ನನಗೆ ಸಿಕ್ಕಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರ ಕಾರ್ಯವೈಖರಿ ನನಗೆ ಹೊಂದಿಕೆಯಾಗುತ್ತಿರಲಿಲ್ಲ. ನನ್ನ ವಿರುದ್ಧ ತನಿಖೆಗೆ ಪೊಲೀಸ್ ಆದೇಶ ಹೊರಡಿಸಿದ್ದು ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಗಳ ನಂತರ ನಾನು ಬಿಜೆಪಿಗೆ ಹೋಗುತ್ತೇನೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ನಾನು ಬಿಜೆಪಿ ಸೇರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದರು.
ಇನ್ನು ತಮ್ಮನ್ನು ಕಾಂಗ್ರೆಸ್ ಸದಸ್ಯತ್ವದಿಂದ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಿರುವ ಬಗ್ಗೆ ಟ್ವೀಟ್ ಮಾಡಿರುವ ಸಚಿನ್, ಸತ್ಯವನ್ನು ಗದರಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಸಚಿನ್ ಪೈಲಟ್ ಅವರ ನಿಷ್ಠಾವಂತ ಇಬ್ಬರು ಸಚಿವರನ್ನು ಸಹ ಸಂಪುಟದಿಂದ ವಜಾ ಮಾಡಲಾಗಿದೆ. ಇನ್ನು ಸಿಎಲ್ ಪಿ ಸಭೆಗೆ ಹಾಜರಾಗದ ಸಚಿನ್ ಪೈಲಟ್ ಮತ್ತು ಇತರ ಶಾಸಕರಿಗೆ ಅನರ್ಹತೆ ನೊಟೀಸ್ ಕಳುಹಿಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.