India vs South Africa 3rd Odi: ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ

India vs South Africa 3rd Odi: ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ

India vs South Africa 3rd Odi:  ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಭಾರತ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಟೀಮ್ ಇಂಡಿಯಾಗೆ ಸೋಲುಣಿಸಿತ್ತು. ಇನ್ನು 2ನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಹೀಗಾಗಿ ಮೂರನೇ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯವಾಗಿತ್ತು.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಈ ಟಾಸ್ ಗೆದ್ದ ಭಾರತ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್​ಗಳು ಆರಂಭದಲ್ಲೇ ಯಶಸ್ಸು ಸಾಧಿಸಿದರು.

ಮೂರನೇ ಓವರ್​ನಲ್ಲಿ ಡಿಕಾಕ್ (7) ವಿಕೆಟ್ ಪಡೆಯುವ ಮೂಲಕ ವಾಷಿಂಗ್ಟನ್ ಸುಂದರ್ ಯಶಸ್ಸಿನ ಖಾತೆ ತೆರೆದರು. ಇದರ ಬೆನ್ನಲ್ಲೇ ಜಾನ್ನೆಮನ್ ಮಲನ್ (15) ವಿಕೆಟ್ ಕಬಳಿಸಿ ಸಿರಾಜ್ ಮತ್ತೊಂದು ಯಶಸ್ಸು ತಂದುಕೊಟ್ಟರು. ಇನ್ನು 3 ರನ್​ಗಳಿಸಿದ್ದ ರೀಝಾ ಹೆಂಡ್ರಿಕ್ಸ್​ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಐಡನ್ ಮಾರ್ಕ್ರಾಮ್ ವಿಕೆಟ್ ಉರುಳಿಸುವ ಮೂಲಕ ಶಹಬಾಜ್ ಅಹ್ಮದ್ ಕೂಡ ವಿಕೆಟ್ ಬೇಟೆ ಆರಂಭಿಸಿದ್ದರು.

ಅಲ್ಲಿಗೆ ಸೌತ್ ಆಫ್ರಿಕಾ ತಂಡವು 15.3 ಓವರ್​ಗಳಲ್ಲಿ ಕೇವಲ 43 ರನ್​ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಡೇವಿಡ್ ಮಿಲ್ಲರ್ (7) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಇದಾದ ಬಳಿಕ ಸೌತ್ ಆಫ್ರಿಕಾದ ಯಾವುದೇ ಬ್ಯಾಟ್ಸ್​ಮನ್​ಗಳನ್ನು ಕ್ರೀಸ್ ಕಚ್ಚಿ ನಿಲ್ಲಲು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಬಿಡಲಿಲ್ಲ. ನಾಲ್ಕು ಓವರ್​ಗಳಲ್ಲಿ 4 ವಿಕೆಟ್ ಉರುಳಿಸುವ ಮೂಲಕ ಕುಲ್ದೀಪ್ ಸೌತ್ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು. ಪರಿಣಾಮ 27.1 ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೇವಲ 99 ರನ್​ಗಳಿಗೆ ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್, ಸಿರಾಜ್, ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 4 ಓವರ್​ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
100 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 8 ರನ್​ಗಳಿಸಿ ಶಿಖರ್ ಧವನ್ ರನೌಟ್ ಆಗಿ ಹೊರನಡೆದಿದ್ದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ (11) ವಿಕೆಟ್ ಕೈಚೆಲ್ಲಿದರು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.  57 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ ಗಿಲ್ 49  ಬಾರಿಸಿದ್ದ ಗಿಲ್ ಅರ್ಧಶತಕದ ಅಂಚಿನಲ್ಲಿ ಲುಂಗಿ ಎನ್​ಗಿಡಿ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು.

ಇನ್ನು ಗಿಲ್​ಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಅಜೇಯ 22 ರನ್​ ಬಾರಿಸಿ 19.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ  ತಂಡವನ್ನು ಗುರಿಮುಟ್ಟಿಸಿದರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಬ್ಯಾಕ್ ಟು ಬ್ಯಾಕ್ ಗೆದ್ದುಕೊಂಡಿರುವುದು ವಿಶೇಷ.
ಭಾರತ ಪ್ಲೇಯಿಂಗ್ 11: ಶಿಖರ್ ಧವನ್ (ನಾಯಕ) , ಶುಭಮನ್ ಗಿಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಮೊಹಮ್ಮದ್ ಸಿರಾಜ್ , ಅವೇಶ್ ಖಾನ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ , ಜಾನ್ನೆಮನ್ ಮಲನ್ , ರೀಜಾ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ (ನಾಯಕ) , ಮಾರ್ಕೊ ಯಾನ್ಸೆನ್ , ಆಂಡಿಲ್ ಫೆಹ್ಲುಕ್ವಾಯೊ , ಜೋರ್ನ್ ಫೋರ್ಚುಯಿನ್ , ಲುಂಗಿ ಎನ್ಗಿಡಿ , ಅನ್ರಿಕ್ ನೋಕಿಯಾ.