ನಾಳೆ ಸಿಲಿಕಾನ್ ಸಿಟಿಗೆ ಪ್ರಧಾನಿ ಮೋದಿ ಆಗಮನ, ಇಸ್ರೋ ಕಚೇರಿಗೆ ಭೇಟಿ - ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ

ಬೆಂಗಳೂರು : ಚಂದ್ರಯಾನ-3ರ ಯಶಸ್ಸಿನ ಅಲೆಯಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆ ಮತ್ತು ಇಡಿ ಭಾರತೀಯರು ತೇಲುತ್ತಿದ್ದಾರೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಕೆಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದಲ್ಲಿದ್ದರು.
ಅಲ್ಲಿಂದ ದೂರವಾಣಿ ಕರೆ ಮಾಡಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಜೊತೆ ಮಾತನಾಡಿದ್ದ, ಪ್ರಧಾನಿ ಮೋದಿ ನಾಳೆ ಆಗಷ್ಟ್ 26ರಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಪ್ರಧಾನಿ ಮೋದಿ ನಾಳೆ ಶನಿವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್‌ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ, ನಾಳೆ ಬೆಂಗಳೂರು ನಗರದ ಕೆಲ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಸುರಕ್ಷತೆಯ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿದ್ದು, ನಾಳೆ ಶನಿವಾರ ಬೆಳಗಿನ ಜಾವ 04.30 ಗಂಟೆಯಿಂದ ಬೆಳಗ್ಗೆ 09.30 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳ ಬದಲು ಪರ್ಯಾಯ ಮಾರ್ಗಗಳನ್ನು ಬಳಸಲು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇತ್ರಿ ಸರ್ಕಲ್), ಸಿವಿ ರಾಮನ್ ರಸ್ತೆ, ಯಶವಂತಪುರ ಫೈ ಓವರ್, ತುಮಕೂರು ರಸ್ತೆ, ಮಾಗಡಿ ರಸ್ತೆ, ಹೊರವರ್ತುಲ ರಸ್ತೆ, ( ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ), ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಗರದೊಳಗೆ ನಾಳೆ ಶನಿವಾರ ಬೆಳಗಿನ ಜಾವ 04.00 ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ನಿಷೇಧಿಸಲಾಗಿರುತ್ತದೆ.